ಸುಳ್ಯ(ದಕ್ಷಿಣ ಕನ್ನಡ): ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ಕೊಚ್ಚಿ ಹೋಗಿರುವ ಮರದ ಸೇತುವೆಯ ಮೇಲೆ ಶ್ವಾನವೊಂದು ನಿಂತು ತನ್ನ ಮನೆಯವರತ್ತ ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪುಕಳ ಎಂಬಲ್ಲಿ ಮರದ ಸೇತುವೆ ಭಾರಿ ಮಳೆಗೆ ಕೊಚ್ಚಿ ಹೋಗಿದೆ. ಪರಿಣಾಮ ಮನೆಗಳ ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ 'ಈಟಿವಿ ಭಾರತ'ವರದಿಯನ್ನು ಬಿತ್ತರಿಸಿತ್ತು. ಇದೀಗ ಆ ಭಾಗದ ನಾಯಿಯೊಂದು ಮುರಿದಿರುವ ಮರದ ಸೇತುವೆಯ ಮೇಲೆ ನಿಂತುಕೊಂಡು ಸೇತುವೆಯ ಇನ್ನೊಂದು ಭಾಗದಲ್ಲಿರುವ ತನ್ನವರ ಕಡೆಗೆ ನೋಡುತ್ತಿದ್ದ ದೃಶ್ಯ ಕಂಡುಬಂದಿತ್ತು.
'ಕನಿಷ್ಠ ನಾಯಿಗೂ ತನ್ನ ಮನೆ ಸೇರುವ ತವಕವಿದೆ' ಎಂಬ ಅಡಿಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಚೇತನ್ ಕಜೆಗದ್ದೆ ಎಂಬವರು ತಮ್ಮ ಫೇಸ್‌ಬುಕ್ ಪೇಜ್ನಲ್ಲಿ ಈ ಪೋಸ್ಟ್ ಮಾಡಿದ್ದರು.