ಕರ್ನಾಟಕ

karnataka

ETV Bharat / city

ಬದುಕಲ್ಲವೆಂದು ಕೈಬಿಟ್ಟ ಖಾಸಗಿ ಆಸ್ಪತ್ರೆ: ವೆನ್ಲಾಕ್​​​ನಲ್ಲಿ ಕೊರೊನಾ ಗೆದ್ದ ವಿಶೇಷ ಚೇತನ ಮಗು!

ಮಂಗಳೂರು ನಗರದ ಕೃಷ್ಣಾಪುರದಲ್ಲಿ ಕೊರೊನಾ ಸೋಂಕು ತಗುಲಿದ್ದ ವಿಶೇಷ ಚೇತನ ಮಗುವೊಂದಕ್ಕೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ಮಹಾಮಾರಿಯಿಂದ ಪಾರು ಮಾಡಿದ್ದಾರೆ. ಈ ಮಗು ಬದುಕುವುದಿಲ್ಲ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದರಂತೆ.

A disabled child has overcome the corona infection
ಕೇಕ್​​ ಕತ್ತರಿಸಿ ಸಂಭ್ರಮಿಸಿದ ವೈದ್ಯರು

By

Published : Aug 19, 2020, 1:03 PM IST

ಮಂಗಳೂರು:ಖಾಸಗಿ ಆಸ್ಪತ್ರೆಯ ವೈದ್ಯರು ಬದುಕಿ ಉಳಿಯುವುದೇ ಇಲ್ಲ ಎಂದು ಕೈಚೆಲ್ಲಿ ಬಿಟ್ಟ ವಿಶೇಷ ಚೇತನ ಮಗುವೊಂದನ್ನು ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ವೈದ್ಯರು ವಿಶೇಷ ಚಿಕಿತ್ಸೆಗೆ ಒಳಪಡಿಸಿ ಕೊರೊನಾ ಸೋಂಕಿನಿಂದ ಪಾರು ಮಾಡಿದ್ದಾರೆ‌. ಸೋಂಕಿನಿಂದ ವಾಸಿಯಾದ ಈ ಮಗುವಿನ ಪೋಷಕರು, ಕುಟುಂಬಸ್ಥರು ಆಸ್ಪತ್ರೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ ಅಪರೂಪದ ಘಟನೆ ನಡೆದಿದೆ.

ನಗರದ ಕೃಷ್ಣಾಪುರದ ವಿಶೇಷ ಚೇತನ ಮಗುವೊಂದಕ್ಕೆ ಕೊರೊನಾ ಸೋಂಕು ತಗುಲಿತ್ತು. ಜೊತೆಗೆ ನ್ಯುಮೋನಿಯಾವೂ ಇದ್ದು, ಆರೋಗ್ಯ ತುಂಬಾ ಹದಗೆಟ್ಟಿತ್ತು. ಮಗುವನ್ನು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು‌. ಅಲ್ಲಿ ಒಂದೇ ದಿನಕ್ಕೆ ಒಂದು ಲಕ್ಷ ರೂ. ಬಿಲ್ ಮಾಡಿ, ಮಗು ಬದುಕಿ ಉಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಕೈಚೆಲ್ಲಿ ಬಿಟ್ಟರಂತೆ.‌

ಸಂಭ್ರಮಿಸಿದ ವೈದ್ಯರ ತಂಡ

ಇದರಿಂದ ಕಂಗಾಲಾದ ಕುಟುಂಬದ ಸದಸ್ಯರು ಮಗುವನ್ನು ಅಲ್ಲಿಂದ ಬಿಡುಗಡೆ ಮಾಡಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಬಾಸಿತ್ ಅಲಿ ನೇತೃತ್ವದ ವೈದ್ಯರ ತಂಡ ಮಗುವಿಗೆ ಚಿಕಿತ್ಸೆ ನೀಡಲು ತಯಾರಾಯಿತು. ತಂಡದ ಎದುರು ಕಠಿಣ ಸವಾಲುಗಳಿತ್ತು. ಆದರೂ ಈ ಎಲ್ಲಾ ಸವಾಲುಗಳನ್ನು ಸ್ವೀಕರಿಸಿದ ತಂಡ, ಮಗುವಿಗೆ ಕ್ಲಿಷ್ಟಕರ ಚಿಕಿತ್ಸೆ ಆರಂಭಿಸಿತ್ತು. ವೈದ್ಯರ, ಶುಶ್ರೂಷಕರ ಮಾನವೀಯ ಸೇವೆಯಿಂದ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತು. ಇದೀಗ 15 ದಿನಗಳ ಬಳಿಕ ಮಗು ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ.

ಮಗು ಕೊರೊನಾ ಗೆದ್ದು ಬಂದಿರೋದನ್ನು ಕಂಡ ಕುಟುಂಬದ ಸಂತೋಷಕ್ಕೆ ಪಾರವೇ ಇಲ್ಲ. ಈ ಸಂದರ್ಭ ವೈದ್ಯರು ಮತ್ತು ಮಗುವಿನ ಕುಟುಂಬದ ಸದಸ್ಯರು ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದರು. ವೈದ್ಯ ಬಾಸಿತ್ ಅಲಿ‌ ಕೇಕ್ ಕತ್ತರಿಸಿ, ತಮ್ಮ ತಂಡದ ವೈದ್ಯರು, ಸಿಬ್ಬಂದಿಯೊಂದಿಗೆ ಹಂಚಿ ಸಂತಸಪಟ್ಟರು. ಜೊತೆಗೆ ತಂಡದ ವೈದ್ಯರಾದ ಪ್ರಸನ್ನ, ಪಾಯಲ್, ಅನುರಾಗ್ ಸೇರಿದಂತೆ ಶುಶ್ರೂಷಕರು, ದಾದಿಯರು ತಂಡದಲ್ಲಿ ಇದ್ದರು.

ಕೇಕ್​​ ಕತ್ತರಿಸಿ ಸಂಭ್ರಮಿಸಿದ ವೈದ್ಯರು

ಬಾಸಿತ್ ಅಲಿ ಮಾತನಾಡಿ, ಬೇರೆ ಆಸ್ಪತ್ರೆಯಿಂದ ಕರೆದುಕೊಂಡು ಬಂದ ಮಗುವಿಗೆ ನಾಲ್ಕೈದು ವೈದ್ಯರ ತಂಡದಿಂದ ಚಿಕಿತ್ಸೆ ಆರಂಭಿಸಿದ್ದೆವು. ಕ್ರಮೇಣ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು ಇದೀಗ ಮಗು ಪೂರ್ತಿ ಗುಣಮುಖವಾಗಿದೆ ಎಂದು ಹೇಳಿದರು.

ಮಗುವಿನ ಪೋಷಕರು ಮಾತನಾಡಿ, ವೈದ್ಯರ ನಿಸ್ವಾರ್ಥ ಸೇವೆಗೆ ಧನ್ಯವಾದಗಳು‌. ಯಾರೂ ವೈದ್ಯರನ್ನು ನಿಂದನೆ ಮಾಡುವುದಾಗಲಿ, ಆಸ್ಪತ್ರೆಗೆ ಕಲ್ಲು ಹೊಡೆಯುವುದಾಗಲಿ ಮಾಡಬೇಡಿ ಎಂದು ವಿನಂತಿಸುತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಉತ್ತಮವಾಗಿ ಸೇವೆ ಮಾಡುತ್ತಾರೆ. ಶುಚಿತ್ವವೂ ಇದೆ. ಜನರು ಯಾವುದೇ ಭಯ, ಆತಂಕಗಳಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.

ABOUT THE AUTHOR

...view details