ಮಂಗಳೂರು:ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಇನ್ನೋವಾ ಕಾರಿನಲ್ಲಿ ಮಾರಕಾಸ್ತ್ರ, ಮೆಣಸಿನ ಹುಡಿಯನ್ನು ಇರಿಸಿಕೊಂಡು ಹೆದ್ದಾರಿ ದರೋಡೆಗೆ ಸಂಚು ರೂಪಿಸುತ್ತಿದ್ದ 8 ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿ ತೌಸೀರ್(28), ಬಂಟ್ವಾಳ ತಾಲೂಕಿನ ಫರಂಗಿಪೇಟೆ ಅರ್ಕುಳ ಕಾಟೇಜ್ ನಿವಾಸಿ ಮೊಹಮ್ಮದ್ ಅರಾಫತ್(29), ಫರಂಗಿಪೇಟೆ ಅಮ್ಮೆಮಾರ್ ನಿವಾಸಿಗಳಾದ ತಸ್ಲಿಂ(27), ಮೊಹಮ್ಮದ್ ಜೈನುದ್ದೀನ್(24), ಬಂಟ್ವಾಳ ತಾಲೂಕಿನ ತುಂಬೆ ಬಳಿಯ ನಿವಾಸಿ ನಾಸಿರ್ ಹುಸೈನ್(29), ಬಂಟ್ವಾಳ ತಾಲೂಕಿನ ಪುದು ಗ್ರಾಮದ ನಿವಾಸಿಗಳಾದ ಮೊಹಮ್ಮದ್ ರಫೀಕ್(37), ಮೊಹಮ್ಮದ್ ಸಫ್ವಾನ್(25), ಮೊಹಮ್ಮದ್ ಉನೈಝ್(26) ಪೊಲೀಸರು ವಶಪಡಿಸಿಕೊಂಡ ಆರೋಪಿಗಳು.
ಹೆದ್ದಾರಿ ದರೋಡೆಗೆ ಸಂಚು ರೂಪಿಸುತ್ತಿದ್ದ 8 ಮಂದಿ ವಶಕ್ಕೆ ದರೋಡೆ ನಡೆಸಲು ಆರೋಪಿ ತೌಸಿರ್ ಹಾಗೂ ವಿದೇಶದಲ್ಲಿರುವ ರೌಡಿ ಶೀಟರ್ ಬಾತೀಶ್ ಸೇರಿ ಟಿಬಿ (ತೌಸೀರ್ & ಬಾತೀಶ್) ಗ್ರೂಪ್ ಕಟ್ಟಿಕೊಂಡಿದ್ದಾರೆ. ಇಂದು ಬೆಳಗ್ಗೆ ನಡೆದಿರುವ ಈ ಪ್ರಕರಣದಲ್ಲಿ ಮೂಲತಃ ದ.ಕ.ಜಿಲ್ಲೆಯ ಬಿ.ಸಿ.ರೋಡ್ ಮೆಲ್ಕಾರ್ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಝಿಯಾದ್ ಎಂಬಾತನನ್ನು ಅಪಹರಣ ಮಾಡಲು ಈ ಗ್ಯಾಂಗ್ ಸಂಚು ರೂಪಿಸಿದೆ. ಝಿಯಾದ್ ಇದೇ ಗ್ಯಾಂಗ್ನ ಸಫ್ವಾನ್ ಎಂಬಾತನಿಂದ ವ್ಯವಹಾರಕ್ಕಾಗಿ 12 ಲಕ್ಷ ರೂ. ಹಣ ಪಡೆದಿದ್ದು, ಈ ಹಣವನ್ನು ಆತ ನೀಡದೇ ಇದ್ದುದರಿಂದ ಆತನನ್ನು ಅಪಹರಣ ಮಾಡಿ ಹಣ ನೀಡದಿದ್ದಲ್ಲಿ ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದಕ್ಕಾಗಿ ತಂಡ ಬೆಂಗಳೂರಿಗೆ ತೆರಳಿದ್ದು, ಅಲ್ಲಿ ಆತ ಸಿಗದ ಕಾರಣ ಮರಳಿ ಬಂದಿರುವ ಗ್ಯಾಂಗ್ ಹೆದ್ದಾರಿ ದರೋಡೆ ಮಾಡಲು ಸಂಚು ರೂಪಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕೊರೊನಾ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಉಳಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ಸಂದರ್ಭ ಆರೋಪಿಗಳು ಇನ್ನೋವಾ ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿ ಮಾರಕಾಯುಧ, ಮೆಣಸಿನ ಹುಡಿಯ ಪ್ಯಾಕೆಟ್ನೊಂದಿಗೆ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿ ದರೋಡೆ ನಡೆಸಲು ಸಂಚು ರೂಪಿಸುತ್ನಿಸುತ್ತಿದ್ದರು. ತಕ್ಷಣ ಅಲ್ಲಿಗೆ ದಾಳಿ ನಡೆಸಿರುವ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭ ಒಂದು ಇನ್ನೋವಾ ಕಾರು ಸಹಿತ ಎರಡು ತಲವಾರು, ಎರಡು ಚೂರಿ, ಒಂದು ಡ್ರಾಗನ್ ಚೂರಿ, 8 ಮೊಬೈಲ್ ಫೋನ್ಗಳು, 5 ಮಂಕಿ ಕ್ಯಾಪ್ಗಳು,ಮೂರು ಮೆಣಸಿನಹುಡಿ ಪ್ಯಾಕೆಟ್ಗಳು ಸಹಿತ 10,89,490 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.