ಕರ್ನಾಟಕ

karnataka

ETV Bharat / city

ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 183 ಜೋಡಿಗಳು ಭಾಗಿ

ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಬಹಳ ಅದ್ಧೂರಿಯಿಂದ ನಡೆಯಿತು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 183 ಜೋಡಿಗಳು ಭಾಗಿಯಾಗಿದ್ದವು. ನವ ದಾಂಪತ್ಯಕ್ಕೆ ಕಾಲಿಟ್ಟ ದಂಪತಿಗಳಿಗೆ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು, ಸಚಿವ ಆರ್ ಅಶೋಕ್, ನಟ ಗಣೇಶ್ ಶುಭ ಹಾರೈಸಿದರು.

50th-mass-wedding-program-in-dharmasthala-temple
ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ : 183 ಜೋಡಿಗಳು ಭಾಗಿ

By

Published : Apr 28, 2022, 9:28 AM IST

Updated : Apr 28, 2022, 10:14 AM IST

ಬೆಳ್ತಂಗಡಿ: ಬದುಕಿನಲ್ಲಿ ಆಸ್ತಿ, ಅಂತಸ್ತು ಮುಖ್ಯ ಅಲ್ಲ. ಪ್ರೀತಿ - ವಿಶ್ವಾಸವೇ ಮುಖ್ಯ. ಬಡತನ - ಸಿರಿತನ ಶಾಶ್ವತವಲ್ಲ. ಪ್ರೀತಿ-ವಿಶ್ವಾಸವಿಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಅವರು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ 50 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗಂಡ - ಹೆಂಡತಿ ಸದಾ ಪರಸ್ಪರ ಅರ್ಥೈಸಿಕೊಂಡು ಪ್ರೀತಿ-ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಲನಚಿತ್ರ ನಟ ಗೊಲ್ಡನ್ ಸ್ಟಾರ್ ಗಣೇಶ್ ಹಾಡು ಹಾಡಿ ನೂತನ ದಂಪತಿಗಳಿಗೆ ಹಾರೈಸಿದರು. ಸತ್ಯ, ಧರ್ಮ, ನ್ಯಾಯ ಮತ್ತು ನೀತಿಗೆ ಪ್ರಸಿದ್ಧವಾದ ಧರ್ಮಸ್ಥಳಕ್ಕೆ ತಾನು ವರ್ಷಕ್ಕೊಮ್ಮೆ ಬಂದು ದೇವರ ದರ್ಶನ ಪಡೆದು ಸೇವೆ ಮಾಡಿ ಹೋಗುತ್ತೇನೆ ಎಂದು ಹೇಳಿದರು. ಸಂಸಾರ ಸಾಗರಕ್ಕೆ ಧುಮುಕಿದ ನವದಂಪತಿಗಳು ಶ್ರೀ ಸ್ವಾಮಿಯ ಅನುಗ್ರಹದಿಂದ ಸುಖ - ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.

ಧರ್ಮಸ್ಥಳದಲ್ಲಿ ನಡೆದ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ

ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿ ಮಾತನಾಡಿ, ಸಾಮೂಹಿಕ ವಿವಾಹ ಸರಳ ಜೀವನಕ್ಕೆ ನಾಂದಿಯಾಗಬೇಕು. ಮದುವೆಯ ಹೆಸರಿನಲ್ಲಿ ದುಂದು ವೆಚ್ಚ ಮಾಡಬಾರದು. ವಿವಾಹಕ್ಕಾಗಿ ಮಾಡುವ ದುಂದು ವೆಚ್ಚ, ವರದಕ್ಷಿಣೆ, ಜೀತಪದ್ಧತಿ ಮೊದಲಾದ ಸಮಸ್ಯೆಗಳನ್ನು ನಿವಾರಿಸಲಿಕ್ಕಾಗಿ ಸಾಮೂಹಿಕ ವಿವಾಹ ಯೋಜನೆಯನ್ನು ಧರ್ಮಸ್ಥಳದಲ್ಲಿ ಆರಂಭಿಸಲಾಗಿದೆ.

ಇಂದು ಜಾತಿ-ಮತ, ಅಂತಸ್ತಿನ ಬೇಧ ಮರೆತು ಸುಮಾರು 60 ಜೋಡಿಗಳು ಅಂತರ್ಜಾತೀಯ ವಿವಾಹವಾದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಇವರಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಿ, ಅದು ಮುಂದೆ ಉದ್ಯೋಗ, ಶಿಕ್ಷಣ ಹಾಗೂ ಸರ್ಕಾರದ ನೆರವು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. ಧರ್ಮಸ್ಥಳದಲ್ಲಿ ಮದುವೆಯಾದವರು ಪರಸ್ಪರ ಅರಿತುಕೊಂಡು ಶಾಂತಿ - ಸಹನೆ ಮತ್ತು ಪ್ರೀತಿ-ವಿಶ್ವಾಸದಿಂದ ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಮದುವೆಯ ಪಾವಿತ್ರ್ಯ ಮತ್ತು ಗಂಭೀರತೆಯನ್ನು ಅರ್ಥಮಾಡಿಕೊಂಡು ಸಾರ್ಥಕ ಜೀವನ ನಡೆಸಿ ಎಂದು ನವ ವಧುವರರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಸಕರುಗಳಾದ ಕೃಷ್ಣಪ್ಪ ಮತ್ತು ಹರೀಶ್ ಪೂಂಜ, ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್, ಗಣೇಶ್ ಕಾಮತ್, ಬಾರಕೂರಿನ ದಾಮೋದರ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

ಗಮನ ಸೆಳೆದ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ :ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಐವತ್ತನೇ ವರ್ಷದ ಉಚಿತ ಸಾಮೂಹಿಕವು ಅದ್ಧೂರಿಯಿಂದ ನಡೆದಿದೆ. ಸಂಜೆ ಗಂಟೆ 6.50 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ 183 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಳಗ್ಗೆ ಹೆಗ್ಗಡೆಯವರ ನಿವಾಸದಲ್ಲಿ ವಧುವಿಗೆ ಸೀರೆ ಮತ್ತು ರವಕೆ ಹಾಗೂ ವರನಿಗೆ ಧೋತಿ, ಶಾಲು ವಿತರಿಸಲಾಗಿತ್ತು.

ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಆಗಮಿಸಿದ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನದ ಮದುವೆ ಮಂಟಪಕ್ಕೆ ಆಗಮಿಸಿದರು. ಅಲ್ಲಿ ಹೆಗ್ಗಡೆಯವರು ಮತ್ತು ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿ ಶುಭ ಹಾರೈಸಿದರು. 6.50 ರ ಗೋಧೂಳಿ ಲಗ್ನದ ಸುಮುಹೂರ್ತದಲ್ಲಿ ವೇದಘೋಷ, ಮಂತ್ರ ಪಠಣ, ಮಂಗಳವಾದ್ಯಗಳೊಂದಿಗೆ ಜಾತಿವಾರು ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿ ಮಂತ್ರಾಕ್ಷತೆ, ಹಾರ ವಿನಿಮಯ ಹಾಗೂ ಮಾಂಗಲ್ಯ ಧಾರಣೆಯೊಂದಿಗೆ ಸಾಮೂಹಿಕ ವಿವಾಹ ನಡೆಸಲಾಯಿತು.

ನೂತನ ದಂಪತಿಗಳಿಂದ ಪ್ರತಿಜ್ಞಾ ವಿಧಿ ಬೋಧನೆ :ಧರ್ಮಸ್ಥಳದಲ್ಲಿ ಮಂಗಲ ಮುಹೂರ್ತದಲ್ಲಿ ವಧು ವರರಾಗಿ ಪವಿತ್ರ ಬಾಂಧವ್ಯವನ್ನು ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ, ಕಾಮದಲ್ಲಿ ಸಹಚರರಾಗಿ, ಪರಸ್ಪರ ಪ್ರೀತಿ ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೇ ಹಾಗೂ ಯಾವುದೇ ದುರಾಭ್ಯಾಸಗಳಿಗೂ ತುತ್ತಾಗದೆ ಬದುಕುತ್ತೇವೆ ಎಂದು ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತಿದ್ದೇವೆ ಎಂದು ನವ ವಧುವರರು ಪ್ರತಿಜ್ಞೆ ಮಾಡಿದರು. ಬಳಿಕ ನೂತನ ದಂಪತಿಗಳು ದೇವಸ್ಥಾನಕ್ಕೆ ಹೋಗಿ ದೇವರದರ್ಶನ ಪಡೆದರು.

ಮದುವೆಯಲ್ಲಿ ಸುಶ್ರಾವ್ಯ ಶೋಭಾನೆ ಹಾಡುಗಳು ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು. 1972 ರಲ್ಲಿ ಪ್ರಥಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದ ಪಕೀರ ಪೂಜಾರಿ ದಂಪತಿ ಮತ್ತು ಸೋಮನಾಥ ಶೆಟ್ಟಿ ದಂಪತಿಯನ್ನು ಈ ವೇಳೆ ಸನ್ಮಾನಿಸಲಾಯಿತು. 1972 ರಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಒಟ್ಟು 88 ಜೋಡಿಗಳು ಭಾಗವಹಿಸಿದ್ದವು.

ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸಲಾಗುತ್ತಿದ್ದು, ಕಳೆದ ವರ್ಷದವರೆಗೆ 12,393 ಜೋಡಿಗಳ ವಿವಾಹವಾಗಿರುವುದಾಗಿ ಹೇಳಲಾಗಿದೆ. 50ನೇ ವರ್ಷದ ಸಾಮೂಹಿಕ ವಿವಾಹದ ಸವಿನೆನಪಿಗಾಗಿ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ ನವಜೋಡಿಗೆ ಹೆಗ್ಗಡೆಯವರು 5,000 ರೂ. ಮೌಲ್ಯದ ಅಡುಗೆ ಪರಿಕರಗಳ ಸೆಟ್ ಉಡುಗೊರೆಯಾಗಿ ನೀಡಿದರು. ಒಟ್ಟು 183 ಜೋಡಿಯಲ್ಲಿ 60 ಜೋಡಿಗಳು ಅಂತರ್ಜಾತೀಯ ವಿವಾಹವಾಗಿದ್ದಾರೆ. ವಿವಾಹದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ದಂಪತಿಯನ್ನು ಇದೇ ವೇಳೆ ಆರತಿ ಬೆಳಗಿ ಗೌರವಿಸಲಾಯಿತು.

ಮನೆಬಾಗಿಲಿಗೆ ಸರ್ಕಾರದ ಸೇವೆ :ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಆರ್ ಅಶೋಕ್, 72 ಗಂಟೆಗಳೊಳಗೆ ಮನೆ ಬಾಗಿಲಿಗೆ ಸರ್ಕಾರದಿಂದ ದೂರವಾಣಿ ಮೂಲಕ ವೃದ್ಧಾಪ್ಯ ವೇತನ ನೀಡುವ ಕಾರ್ಯಕ್ರಮ ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎಂದು ಹೇಳಿದರು. ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಈ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಎಲ್ಲರೂ ಸತ್ಯ, ಧರ್ಮದ ಹಾದಿಯಲ್ಲಿ ನಡೆದು ಸುಖ-ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ನವ ಜೋಡಿಗೆ ಇದೇ ವೇಳೆ, ಹಾರೈಸಿದ್ದಾರೆ.

ಓದಿ :ಸಚಿವ ಸಿಸಿ ಪಾಟೀಲ್ ವಿರುದ್ಧ ದಿಂಗಾಲೇಶ್ವರ ಶ್ರೀಗಳ ಪ್ರತಿಭಟನೆ: ಶ್ರೀಗಳನ್ನು ತಡೆದ ಪೊಲೀಸರು

Last Updated : Apr 28, 2022, 10:14 AM IST

ABOUT THE AUTHOR

...view details