ನೆಲ್ಯಾಡಿ: ಗುಂಡ್ಯದಲ್ಲಿ ನಿಲ್ಲಿಸಿದ್ದ ಲಾರಿಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ರಬ್ಬರ್‌ಶೀಟ್ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಪ್ಪಿನಂಗಡಿ ಮತ್ತು ನೆಲ್ಯಾಡಿ ಹೊರಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿ ರಿಜು ಯಾನೆ ತೋಮಸ್ (33), ಎಡಪ್ಪಾಟ್ ನಿವಾಸಿ ಇ.ಪಿ ವರ್ಗಿಸ್(48), ಪೇರಮಜಲು ನಿವಾಸಿ ಶೀನಪ್ಪ (46) ಎಂದು ಗುರುತಿಸಲಾಗಿದೆ.
ಘಟನೆ ವಿವರ:ಉಜಿರೆಯಿಂದ ತಮಿಳುನಾಡಿಗೆ ರಬ್ಬರ್ ಶೀಟ್ ಸಾಗಾಟ ಮಾಡುತ್ತಿದ್ದ ಲಾರಿ(TN 73 M 3499)ಯನ್ನು ಜು. 25ರಂದು ದೋಣಿಗಲ್‌ನಲ್ಲಿ ರಸ್ತೆ ಕುಸಿತಗೊಂಡು ಸಂಚಾರ ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಲಾರಿ ಚಾಲಕ ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯದಲ್ಲಿ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ತಮಿಳುನಾಡು ಮೂಲದವರಾದ ಲಾರಿಯ ನಿರ್ವಾಹಕ ಲಾರಿಗೆ ಅಳವಡಿಸಲಾಗಿದ್ದ ಟಾರ್ಪಲ್ನಲ್ಲಿ ನಿಂತಿದ್ದ ನೀರು ತೆಗೆಯಲೆಂದು ಲಾರಿಯ ಮೇಲೆ ಹತ್ತಿದ್ದು, ಅಲ್ಲಿಂದ ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ನಿರ್ವಾಹಕ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಕಾರಣದಿಂದಾಗಿ ನಿರ್ವಾಹಕನ ಮೃತದೇಹವನ್ನು ಲಾರಿ ಚಾಲಕನು ತಮಿಳುನಾಡಿಗೆ ಕೊಂಡೊಯ್ದು ಕುಟುಂಬಸ್ಥರಿಗೆ ಒಪ್ಪಿಸಿ ಮರುದಿನ ಲಾರಿ ನಿಲ್ಲಿಸಿದ್ದ ಗುಂಡ್ಯಕ್ಕೆ ಬಂದ ವೇಳೆ ಲಾರಿಯಲ್ಲಿದ್ದ ಅರ್ಧದಷ್ಟು ರಬ್ಬರ್ ಶೀಟ್ ಕಳವುವಾಗಿದ್ದು ಗಮನಕ್ಕೆ ಬಂದಿತ್ತು.