ಸುಳ್ಯ :ಮೂಲಸೌಕರ್ಯಗಳ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ಸೇರಿದಂತೆ ಕೃಷಿ ಕ್ಷೇತ್ರಕ್ಕೆ 2.31 ಲಕ್ಷ ಕೋಟಿ ರೂ. ಬಜೆಟ್ ನಲ್ಲಿ ಮೀಸಲಿಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕೇಂದ್ರ ಸಚಿವೆಯಾದ ಬಳಿಕ ಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಸಚಿವೆ ಶೋಭಾ ಕರಂದ್ಲಾಜೆಗೆ ಬಿಜೆಪಿ ಸುಳ್ಯ ಮಂಡಲ ಸಮಿತಿಯು ಸನ್ಮಾನ ಸಮಾರಂಭ ಏರ್ಪಡಿಸಿತ್ತು. ಕಾರ್ಯಕ್ರಮದ ನಂತರ ಮಾತನಾಡಿದ ಕೇಂದ್ರ ಸಚಿವೆ, ಕೇಂದ್ರ ಸರಕಾರವು ಈಗಾಗಲೇ ಕೃಷಿಕರಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ.
ಕೃಷಿ ಕ್ಷೇತ್ರಕ್ಕೆ 2.31 ಲಕ್ಷ ಕೋಟಿ ರೂ ಬಜೆಟ್ ನಲ್ಲಿ ಮೀಸಲಿಡಲಾಗಿದ್ದು, ಇದು ದೇಶದ ಪ್ರತಿಯೊಬ್ಬ ರೈತನಿಗೂ ತಲುಪುವಂತಾಗಬೇಕು. ಇದಕ್ಕಾಗಿ ಆಯಾ ರಾಜ್ಯದ ಭಾಷೆಯಲ್ಲಿಯೇ ರೈತರಿಗೆ ಮಾಹಿತಿಯನ್ನೂ ನೀಡಲಾಗುವುದು. ಆಹಾರ ಉತ್ಪನ್ನಗಳ ರಫ್ತು ಮಾಡುವ ರಾಷ್ಟ್ರಗಳಲ್ಲಿ ಭಾರತ ಈಗ 9ನೇ ಸ್ಥಾನದಲ್ಲಿದೆ. ಕೆಲವೇ ವರ್ಷದಲ್ಲಿ ಭಾರತವು ಐದರ ಒಳಗಿನ ಸ್ಥಾನಕ್ಕೆ ಬರಲಿದೆ ಎಂದು ಹೇಳಿದರು.
ಕೇಂದ್ರ ಸಚಿವೆಗೆ ಬಿಜೆಪಿ ಸುಳ್ಯ ಮಂಡಲ ಸಮಿತಿಯಿಂದ ಸನ್ಮಾನ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅವರು ಮಾತನಾಡಿ, ನನಗೆ ಯಾವುದೇ ಲಾಬಿ ಮಾಡದೆ ಸಚಿವ ಸ್ಥಾನ ಸಿಕ್ಕಿದೆ. ಸಿಕ್ಕಿದ ಅವಕಾಶವನ್ನು ಸರಿಯಾದ ರೀತಿ ಬಳಸಿಕೊಂಡು ಸುಳ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ ಕೈಗೊಂಡಿರುವೆ.
ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನುಮಾಡಿಯೇ ಮಾಡುತ್ತೇವೆ. ಈ ಕುರಿತು ಯಾರಿಗೂ ಸಂಶಯ ಬೇಡ ಎಂದರು. ನಿರಂತರವಾಗಿ 1994ರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ಅದು ಪೂರ್ತಿಯಾಗಿಲ್ಲ. ಅದು ಅದೇ ತರಹ ಮುಂದುವರಿಯಲಿದೆ ಎಂದರು.
ಸಚಿವ ಎಸ್. ಅಂಗಾರರಿಗೆ ರಾಖಿ ಕಟ್ಟಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಕ್ಷಾಬಂಧನ ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಚಿವ ಎಸ್ ಅಂಗಾರರಿಗೆ ಹಾಗೂ ಅಂಗಾರ ಅವರು ಶೋಭಾ ಕರಂದ್ಲಾಜೆ ಅವರಿಗೆ ಪರಸ್ಪರ ರಾಖಿ ಕಟ್ಟುವ ಮೂಲಕ ಸೋದರ-ಸೋದರಿಯ ಭಾವನೆ ತೋರಿಸಿದರು.