ಮಂಗಳೂರು: ನಗರದ ಪುತ್ತೂರಿನ 156 ವರ್ಷಗಳಷ್ಟು ಹಳೆಯದಾದ, ಡಾ.ಶಿವರಾಮ ಕಾರಂತರ ರಂಗಪ್ರಯೋಗ ಶಾಲೆ ಎಂದು ಹೆಗ್ಗಳಿಕೆ ಪಡೆದ ನೆಲ್ಲಿಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ನೆಲಸಮಗೊಳಿಸಲಾಯಿತು.
ಅನುದಾನವಿಲ್ಲದ ಹಿನ್ನೆಲೆಯಲ್ಲಿ ಈ ಶಾಲೆಯು ದುರಸ್ತಿಯಾಗದೆ ನಿರ್ಲಕ್ಷ್ಯಕ್ಕೊಳಗಾಗಿತ್ತು. ಇದರ ಹತ್ತಿರವೇ ಇನ್ನೊಂದು ಶಾಲೆಯನ್ನು ನಿರ್ಮಾಣ ಮಾಡಲಾಗಿತ್ತು. ಶಾಲೆಯ ಮಕ್ಕಳು ಇಲ್ಲಿಯೇ ಆಟವಾಡುತ್ತಿರುವಾಗ ಈ ಕಟ್ಟಡದ ಭಾಗಗಳು ಕುಸಿದ ಘಟನೆಗಳು ನಡೆದಿತ್ತು. ಆದ್ದರಿಂದ ಶಾಲಾ ಎಸ್ಡಿಎಂಸಿ ಹಾಗೂ ಸ್ಥಳೀಯರು ಸೇರಿ ಕಟ್ಟಡ ನಿರ್ವಹಣೆಗೆ ಶಾಸಕರ ಅನುಮತಿ ಪಡೆದು ಹೆಂಚು ತೆಗೆಯುವ ಕಾರ್ಯ ನಡೆಸುತ್ತಿದ್ದಾಗ ಶಾಲಾ ಕಟ್ಟಡದ ಒಂದು ಭಾಗ ಸಂಪೂರ್ಣ ಕುಸಿದಿದೆ. ಆದ್ದರಿಂದ ಉಳಿದ ಭಾಗವು ಕುಸಿಯುವ ಭೀತಿಯಿಂದ ಎಸ್ ಡಿಎಂಸಿ ಹಾಗೂ ಸ್ಥಳೀಯರ ಸಭೆ ನಡೆಸಿ ತುರ್ತಾಗಿ ಸಂಪೂರ್ಣ ಧ್ವಂಸಗೊಳಿಸಲಾಗಿತ್ತು.
ನೆಲಸಮವಾಯಿತು ಪುತ್ತೂರಿನ 156 ವರ್ಷಗಳ ಹಿಂದಿನ ಸರಕಾರಿ ಶಾಲೆ 2019ರ ಜನವರಿ 14, 2019ರಂದು ಪುತ್ತೂರಿನ ಬರಹಗಾರ ಡಾ.ಎಸ್.ಎನ್.ಅಮೃತ್ ಮಲ್ಲ ಅವರು 156 ವರ್ಷಗಳಷ್ಟು ಹಳೆಯದಾದ ಈ ಶಾಲೆಯ ಕಟ್ಟಡದ ದಯನೀಯ ಸ್ಥಿತಿಯ ಬಗ್ಗೆ ಗಮನ ಸೆಳೆಯಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.
ಈ ವರ್ಷದ ನವೆಂಬರ್‌ನಲ್ಲಿ, ಡಾ.ಅಮೃತ್ ಮಲ್ಲ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ದ.ಕ.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್, ಶಾಲಾ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿಗೆ ಸಹಾಯ ಮಾಡಲು 53.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಮತ್ತು ಶಾಲೆಯು ತನ್ನ ವೈಭವವನ್ನು ಪೂರ್ವ ಸಿದ್ಧತೆಗಳನ್ನು ಮಾಡಲಾಗುತ್ತಿತ್ತು. ಆದರೆ ಅದಾಗಿ ಕೆಲವೇ ದಿನಗಳು ಅಂದರೆ ಕಳೆದ 15 ದಿನಗಳಲ್ಲಿ ಈ ಶಾಲೆಯು ಸಂಪೂರ್ಣ ಧ್ವಂಸವಾಗಿದೆ.
ಶತಮಾನಗಳಷ್ಟು ಹಳೆಯದಾದ ನೆಲ್ಲಿಕಟ್ಟೆ ಶಾಲೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ವರದಿ ಕೇಳಿದ್ದಾರೆ. ಡಾ.ಅಮೃತ್ ಮಲ್ಲ ಅವರು ಈ ಬಗ್ಗೆ ಪ್ರತಿಕ್ರಿಯಿಸಿ 'ದ.ಕ.ಜಿಲ್ಲೆ ಸೇರಿದಂತೆ ಕರಾವಳಿಯಲ್ಲಿ ಶತಮಾನಗಳಷ್ಟು ಹಳೆಯದಾದ 163 ಶಾಲೆಗಳಿವೆ. ಅವೆಲ್ಲದರ ಭವಿಷ್ಯ ಇದೇ ರೀತಿ ಇರಲಿದೆ. ಶತಮಾನಗಳಷ್ಟು ಹಳೆಯದಾದ ಇಂತಹ ಶಾಲೆಗಳನ್ನು ನಿರ್ಲಕ್ಷ್ಯಕ್ಕೊಳಗಾಗುವುದಕ್ಕೆ ಸ್ಥಳೀಯ ಶಾಸಕರು ನೇರಹೊಣೆ. ಇಂತಹ ಶಾಲೆಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲು ಶಾಸಕರುಗಳಿಗೆ, ಜನಪ್ರತಿನಿಧಿಗಳಿಗೆ ಶಾಲೆಗಳ ಅಗತ್ಯತೆಯಿದೆ ಎಂದು ದೂಷಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಕಚೇರಿ ಸಿಬ್ಬಂದಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡೇ ಕಚೇರಿಗೆ ಬರಬೇಕು: ಸಚಿವ ಸುಧಾಕರ್