ಕಲಬುರಗಿ :ಪಿಎಸ್ಐ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಕೆ ಮಾಡಿ ಹೇಗೆ ಅಕ್ರಮ ಮಾಡಲಾಗಿದೆ ಎಂಬುವುದಕ್ಕೆ ವಿಡಿಯೋ ಸಾಕ್ಷಿಯೊಂದು ಲಭ್ಯವಾಗಿದೆ. ಸಿಐಡಿ ತಂಡ ವಿಡಿಯೋ ಸಾಕ್ಷಿ ಇಟ್ಟುಕೊಂಡು ಪ್ರಕರಣದಲ್ಲಿ ಮತ್ತಷ್ಟು ಆಳಕ್ಕೆ ಇಳಿಯಲು ಮುಂದಾಗಿದ್ದಾರೆ.
ಪರೀಕ್ಷಾರ್ಥ ಅಭ್ಯರ್ಥಿಗೆ ಅತಿ ಸೂಕ್ಷ್ಮವಾದ ಬ್ಲೂಟೂತ್ ಡಿವೈಸ್ ನೀಡಿ ಪರೀಕ್ಷಾ ಹಾಲ್‌ಗೆ ಕಳಿಸುತ್ತಿದ್ದ ಅಕ್ರಮ ಜಾಲ, ಹತ್ತಿರದ ಲಾಡ್ಜ್‌ವೊಂದರಲ್ಲಿ ಕುಳಿತು ಡಿವೈಸ್ ಮೂಲಕ ಉತ್ತರ ಹೇಳುತ್ತಿದ್ದರು.
ಪುಟ್ಟ ಮಕ್ಕಳಿಗೆ ಹೇಳಿದಂತೆ ಒಂದು ಉತ್ತರವನ್ನು ಮೂರು ಬಾರಿ ಹೇಳುವ ಮೂಲಕ ಪರೀಕ್ಷೆ ಬರೆಯಲು ಸಹಾಯ ಮಾಡುತ್ತಿದ್ದರು. ಇಂತಹದೊಂದು ವಿಡಿಯೋ ಈಗ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿ ಉತ್ತರ ಹೇಳಿದ ವ್ಯಕ್ತಿ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪಿಎಸ್ಐ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಕೆ : ವಿಡಿಯೋ ಬ್ಲೂಟೂತ್ ಡಿವೈಸ್ ಬಳಕೆ ಮಾಡಿ ಪರೀಕ್ಷೆ ಅಕ್ರಮ ಮಾಡಿದ್ದನ್ನು ಪತ್ತೆ ಮಾಡಿದ ಸಿಐಡಿ ಈಗಾಗಲೇ ಕಿಂಗ್‌ಪಿನ್ ರುದ್ರಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಮಲ್ಲುಗೌಡ ಬಿದನೂರ, ಪರೀಕ್ಷಾರ್ಥಿ ಅಭ್ಯರ್ಥಿ ಶಾಸಕ ಎಂ.ವೈ ಪಾಟೀಲ್ ಗನ್‌ಮ್ಯಾನ್ ಹಯ್ಯಾಳ ದೇಸಾಯಿ ಸೇರಿ ಐದು ಜನರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ.
ಪಿಎಸ್ಐ ಪರೀಕ್ಷೆಯಲ್ಲಿ ಎರಡು ರೀತಿಯ ಅಕ್ರಮವಾಗಿದೆ ಎನ್ನಲಾಗ್ತಿದೆ. ಓಎಂಆರ್ ಶೀಟ್ನಲ್ಲಿ ಅಕ್ರಮವಾಗಿ ಉತ್ತರ ಬರೆಯುವ ತಂಡ ಒಂದಾದರೆ, ಇನ್ನೊಂದು ತಂಡ ಬ್ಲೂಟೂತ್ ಡಿವೈಸ್ ಬಳಕೆ ಮಾಡಿ ಅಕ್ರಮ ಪರೀಕ್ಷೆ ಬರೆಸುತ್ತಿದ್ದರು ಎನ್ನಲಾಗ್ತಿದೆ.
ಗಮನಾರ್ಹ ವಿಷಯವೆಂದರೆ ಓಎಂಆರ್ ಶೀಟ್ ಅಕ್ರಮದಲ್ಲಿ ಬಿಜೆಪಿ ನಾಯಕರ ಹೆಸರುಗಳು ತಳಕು ಹಾಕಿಕೊಂಡಿದ್ದರೆ, ಬ್ಲೂಟೂತ್ ಡಿವೈಸ್ ಅಕ್ರಮದಲ್ಲಿ ಕಾಂಗ್ರೆಸ್ ನಾಯಕರುಗಳ ಹೆಸರು ತಳಕು ಹಾಕಿಕೊಂಡಿವೆ.
ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ : ಮೂವರು ಮಹಿಳಾ ಮೇಲ್ವಿಚಾರಕಿಯರು ಸೇರಿ 6 ಜನ ಅರೆಸ್ಟ್