ಕಲಬುರಗಿ/ಕಾರವಾರ: ಜೇವರ್ಗಿ ಹಾಗೂ ಅಂಕೋಲಾದಲ್ಲಿ ಇಬ್ಬರು ವಿಕಲಚೇತನರು ಬಿರು ಬಿಸಿಲನ್ನೂ ಲೆಕ್ಕಿಸದೆ ತಮ್ಮ ಹಕ್ಕನ್ನು ಚಲಾಯಿಸಿ ಮಾದರಿಯಾಗಿದ್ದಾರೆ.
ಕೆಂಡದಂತಹ ಬಿಸಿಲನ್ನು ಲೆಕ್ಕಿಸದೆ ವಿಕಲಚೇತನ ಮಹಿಳೆಯೊಬ್ಬಳು ಮತ ಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾಯಿಸಿ ಮಾದರಿಯಾದ ಘಟನೆ ತಾಲೂಕಿನ ನರಿಬೋಳ ಗ್ರಾಮದಲ್ಲಿ ನಡೆದಿದೆ.
ಗರಿಷ್ಠ 40 ಡಿಗ್ರಿ ಬಿಸಿಲಿನ ತಾಪದಲ್ಲಿಯೂ ಯಾರ ಸಹಾಯವಿಲ್ಲದೆ, ತಮಗಿರುವ ಒಂದು ಕೈ, ಒಂದು ಕಾಲಿನ ಸಹಾಯದಿಂದ ಮತಗಟ್ಟೆಗೆ ಆಗಮಿಸಿದ ಮಹಿಳೆ, ನರಿಬೋಳ ಗ್ರಾಮದ ಬೂತ್ ಸಂಖ್ಯೆ 4ರಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಹೀಗೆ ಮಾದರಿಯಾದ ಮಹಿಳೆ ನರಿಬೋಳ ಗ್ರಾಮದ ರಜೀಯಾಬಿ ಎಂದು ತಿಳಿದುಬಂದಿದೆ.
ವಿಕಲಾಂಗ ಚೇತನರಿಂದ ಹಕ್ಕು ಚಲಾವಣೆ ಇನ್ನು ಮಹಿಳೆಗೆ ನೇರವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸುವ ಮೂಲಕ ಸರದಿ ಸಾಲಿನಲ್ಲಿ ನಿಂತಿದ್ದವರು ಮಾನವೀಯತೆ ಮೆರೆದರು.
ಇದೇ ರೀತಿ ಅಂಕೋಲಾ ತಾಲೂಕಿನ ಬೊಬ್ರವಾಡ ಬಂದರು ಮತಗಟ್ಟೆ ವ್ಯಾಪ್ತಿಯ ವಿಕಲಚೇತನ ಮತದಾರ ವಿಜಯ ಕುಮಾರ್ ನಾಯ್ಕ, ತಮ್ಮ ಹಕ್ಕು ಚಲಾಯಿಸಿದ್ದಾರೆ. ಎರಡು ಕಾಲಿನ ಸ್ವಾಧೀನ ಕಳೆದುಕೊಂಡು ಅಂಗವೈಕಲ್ಯಕ್ಕೆ ತುತ್ತಾಗಿರುವ ಅವರು ತಮ್ಮ ಹಕ್ಕನ್ನು ಚಲಾಯಿಸುವುದಕ್ಕಾಗಿಯೇ ಮನೆಯಿಂದ ತೆವಳಿಕೊಂಡು ಬಂದು ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.