ಕರ್ನಾಟಕ

karnataka

ETV Bharat / city

ಇಂದು ಹೊರಬೀಳಲಿದೆ ಮೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಗೆಲುವಿನ ಮಾಲೆ ಯಾರ ಕೊರಳಿಗೆ? - ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ, ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ.

municipal corporation
ಮಹಾನಗರ ಪಾಲಿಕೆ

By

Published : Sep 6, 2021, 6:58 AM IST

ಕಲಬುರಗಿ/ಧಾರವಾಡ /ಬೆಳಗಾವಿ: ಮೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಬೆಳಗ್ಗೆ 8 ಗಂಟೆಯಿಂದ ಆಯಾ ನಗರಗಳಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದ್ದು, ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಮತ ಎಣಿಕೆ ಕಾರ್ಯಕ್ಕೆ 110 ಸಿಬ್ಬಂದಿ ನೇಮಕ :

ಕಲಬುರಗಿ ನಗರದ ನೂತನ ವಿದ್ಯಾಲಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. 55 ವಾರ್ಡ್‌ಗಳಿಗೆ ಸ್ಪರ್ಧಿಸಿದ 300 ಅಭ್ಯರ್ಥಿಗಳ ಭವಿಷ್ಯ ಇಂದು ಹೊರ ಬೀಳಲಿದೆ. ಬೆಳಗ್ಗೆ 7:45ಕ್ಕೆ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮತ ಎಣಿಕೆಗಾಗಿ 11 ಕೌಂಟಿಂಗ್ ಹಾಲ್ ಸಿದ್ಧಪಡಿಸಲಾಗಿದೆ‌. ಒಟ್ಟು 55 ಚುನಾವಣಾಧಿಕಾರಿ ಹಾಗೂ 55 ಜನ ಎಣಿಕೆ ಸಹಾಯಕರು ಇರಲಿದ್ದಾರೆ. ಮತ ಎಣಿಕೆ ಕಾರ್ಯಕ್ಕೆ ಒಟ್ಟು 110 ಸಿಬ್ಬಂದಿ ನೇಮಕ ಮಾಡಲಾಗಿದೆ.

ಧಾರವಾಡ ಮತ ಎಣಿಕೆ:

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ. ಹುಬ್ಬಳ್ಳಿ - ಧಾರವಾಡ ಮಹಾನಗರಪಾಲಿಕೆಯ 82 ವಾರ್ಡ್​ಗಳಿಗೆ ಚುನಾವಣೆ ಜರುಗಿದ್ದು, 420 ಜನ ಸ್ಪರ್ಧಿಗಳ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣಾಧಿಕಾರಿ ಅಧೀನದಲ್ಲಿ ಏಕಕಾಲಕ್ಕೆ ಮೂರು ವಾರ್ಡ್​ಗಳ ಮತ ಏಣಿಕೆ ಕಾರ್ಯ ಆರಂಭವಾಗುತ್ತದೆ. 16 ಜನ ಚುನಾವಣಾಧಿಕಾರಿಗಳು ಸೇರಿ ಒಟ್ಟು 48 ವಾರ್ಡ್​ಗಳ ಮತ ಎಣಿಕೆ ಕಾರ್ಯ ಏಕಕಾಲಕ್ಕೆ ಆರಂಭವಾಗುತ್ತದೆ.

ಹೀಗೆ ಆಯಾ ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ ಮತ್ತೊಂದು ವಾರ್ಡ್​ನ ಮತ ಎಣಿಕೆ ಆರಂಭಿಸುತ್ತಾರೆ. ಮತ್ತು ಚುನಾವಣಾಧಿಕಾರಿಗಳು ತಮ್ಮ ವಾರ್ಡ್​ಗಳ ಫಲಿತಾಂಶ ಘೋಷಿಸುತ್ತಾರೆ. ಮತ ಎಣಿಕಾ ಕೇಂದ್ರಕ್ಕೆ ಎಣಿಕಾ ಏಜೆಂಟ್, ಸ್ಪರ್ಧಿಸಿರುವ ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್ ಮಾತ್ರ ಬರಲು ಅವಕಾಶ ನೀಡಲಾಗಿದೆ.

ಏಕಕಾಲಕ್ಕೆ 24 ವಾರ್ಡ್​ಗಳ ಮತ ಎಣಿಕೆ:

ಬೆಳಗಾವಿ ನಗರದ ಬಿ.ಕೆ.ಮಾಡಲ್ ಸ್ಕೂಲ್​ನಲ್ಲಿ 58 ವಾರ್ಡ್​ಗಳಿಗೆ ಸ್ಪರ್ಧಿಸಿದ್ದ 385 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದು ಮಧ್ಯಾಹ್ನ 12 ಗಂಟೆಯ ನಂತರ ಸಂಪೂರ್ಣವಾಗಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮತ ಎಣಿಕೆಗಾಗಿ 12 ರೂಮ್​ಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 1 ರೂಮ್​ನಲ್ಲಿ 2 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 12 ರೂಮ್​ಗಳಲ್ಲಿ 24 ಟೇಬಲ್​ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಏಕಕಾಲದಲ್ಲಿ 24 ವಾರ್ಡ್​ಗಳ ಮತ ಎಣಿಕೆ ಪ್ರಾರಂಭವಾಗಲಿದೆ.

ನಿಷೇಧಾಜ್ಞೆ ಜಾರಿ :

ಮತ ಎಣಿಕೆ ಕೇಂದ್ರದಿಂದ 100 ಮೀಟರ್ ಅಂತರದಲ್ಲಿ ಸೆಕ್ಷನ್​ 144 ಜಾರಿಗೊಳಿಸಲಾಗಿದೆ. ವಿಜಯೋತ್ಸವಕ್ಕೆ ನಿರ್ಬಂಧ ಹೇರಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕೌಂಟಿಂಗ್ ನಡೆಸಲು ಸಿದ್ಧತೆ ನಡೆಸಲಾಗಿದೆ. ಜೊತೆಗೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ:

ಮತ ಎಣಿಕೆ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ. ಪರಸ್ಪರ ಸಾಮಾಜಿಕ ಅಂತರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಲಾಗಿದ್ದು, ಮತ ಎಣಿಕೆ ಕೇಂದ್ರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ.

For All Latest Updates

ABOUT THE AUTHOR

...view details