ಕಲಬುರಗಿ:ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಗೆ ಕಾರಣರಾದವರನ್ನು ಅಮಾಯಕರು ಎಂದು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಠಾಣೆ ಮತ್ತು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆದ ವೇಳೆ ಫೈರಿಂಗ್ನಲ್ಲಿ ಮೂವರು ಸಾವನ್ನಪ್ಪಿದ್ದರು. ಇವರು ಅಮಾಯಕರೆಂದು ಆ ವೇಳೆ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದರು. ಆದರೆ ಈಗ ಎನ್.ಐ.ಎ. ವರದಿ ಬಂದಿದ್ದು, ಪಿಎಫ್ಐ ಹಾಗೂ ಎಸ್.ಡಿ.ಪಿ.ಐ. ವ್ಯವಸ್ಥಿತ ಪಿತೂರಿಯಿಂದ ಗಲಭೆ ಸಂಭವಿಸಿದೆ ಎಂದು ವರದಿಯಿಂದ ಬಹಿರಂಗವಾಗಿದೆ. ಸಮರ್ಥನೆ ಹೇಳಿಕೆ ನೀಡಿದವರು ಕ್ಷಮೆ ಕೇಳಬೇಕು ಹಾಗೂ ರಾಜ್ಯ ಸರ್ಕಾರ ಇವರಿಬ್ಬರ ಮೇಲೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣ ಕೇಂದ್ರದ ಕೈಯಲ್ಲಿ ಇಲ್ಲ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿ ಇಲ್ಲ. ರಾಜ್ಯ ಸರ್ಕಾರಗಳು ತಮ್ಮ ಸುಂಕವನ್ನು ಕಡಿತ ಮಾಡಿದರೆ ದರ ಇಳಿಕೆಯಾಗಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರಕ್ಕಿಂತ ಹೆಚ್ಚಿನ ಸುಂಕವನ್ನು ರಾಜ್ಯ ಸರ್ಕಾರಗಳು ವಿಧಿಸುತ್ತವೆ. ಹೀಗಾಗಿ ಆಯಾ ರಾಜ್ಯಗಳು ತಮ್ಮ ಪಾಲಿನ ಸುಂಕ ಕಡಿತ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಓದಿ..ಜಿಟಿಡಿ, ಅಸ್ನೋಟಿಕರ್ ಜೆಡಿಎಸ್ ಬಿಡಲ್ಲ; ಹೆಚ್.ಡಿ. ದೇವೇಗೌಡ
ನಾಗರಿಕರ ಮೇಲಿನ ಹೊರೆ ಇಳಿಸುವ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ ಆಡಳಿತ ಇರುವ ರಾಜ್ಯಗಳು ಸುಂಕು ಕಡಿತ ಮಾಡುತ್ತಿವೆ. ನಮ್ಮ ರಾಜ್ಯ ಸರ್ಕಾರ ಕೂಡ ಇಂಧನ ಸುಂಕ ಕಡಿತ ಮಾಡುವಂತೆ ಪಕ್ಷದ ವತಿಯಿಂದಲೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಿದ್ದರೂ ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿತ್ತು. ಈಗ ಕಚ್ಚಾ ತೈಲ ಬೆಲೆ ಕಡಿಮೆ ಇರಬಹುದು. ಆದರೆ, ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆಯಾಗಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯೊಂದು ಧರ್ಮ ಸಂಕಟ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.