ಕಲಬುರಗಿ: ಸಾರಿಗೆ ಇಲಾಖೆ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ವಿದ್ಯಾರ್ಥಿಗಳು ದಿನನಿತ್ಯ 4 ಕಿಮೀ ದೂರ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.
ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ ಹಲಕರ್ಟಿ ಗ್ರಾಮದಿಂದ ಬಲರಾಮ್ ಚೌಕ್ ಹಾಗೂ ಪಟ್ಟಣದ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿದಿನ ತೆರಳುತ್ತಾರೆ. ಆದರೆ, ಈ ಮಾರ್ಗವಾಗಿ ಸಂಚರಿಸುವ ಕೆಲ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದ ಹಿನ್ನೆಲೆ ಹಾಗೂ ಸರಿಯಾಗಿ ಬಸ್ ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕವೇ ಶಾಲೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಅಸಮಾಧಾನ ಹೊರಹಾಕಿರುವ ವಿದ್ಯಾರ್ಥಿಗಳು, ಬೆಳಗ್ಗೆ 8 ಗಂಟೆಯಿಂದ ಯಾದಗಿರಿ-ಕಲಬುರಗಿ ಹಾಗೂ ರಾಯಚೂರು-ಕಲಬುರಗಿಗೆ ನಾಲ್ಕೈದು ಬಸ್ ಸಂಚರಿಸುತ್ತಿದ್ದು, ನಿರ್ವಾಹಕರು ನಮ್ಮನ್ನು ಬಸ್ನಲ್ಲಿ ಹತ್ತಿಸಿಕೊಳ್ಳುತ್ತಿಲ್ಲ. ಹೀಗಾಗಿ ಪಾಸ್ ಇದ್ರೂ ಕೂಡ ಯಾವುದೇ ಪ್ರಯೋಜನವಿಲ್ಲ. ಸಮಯಕ್ಕೆ ಸರಿಯಾಗಿ ಬಸ್ ಸಿಗದ ಹಿನ್ನೆಲೆ ಸಕಾಲಕ್ಕೆ ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ:
ಇನ್ನು ಪ್ರತಿನಿತ್ಯ ಶಾಲೆಗೆ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಬಸ್ ಇಲ್ಲದ ಕಾರಣ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲಾಗುತ್ತಿಲ್ಲ. ಆದ್ದರಿಂದ ಸಾರಿಗೆ ಇಲಾಖೆ ಕೂಡಲೇ ಗಮನ ಹರಿಸಿ ಹಲಕರ್ಟಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.