ಕಲಬುರಗಿ: ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಕಲಬುರಗಿಗೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಾವು ಉಪಚುನಾವಣೆಯನ್ನು ಬಯಸಿರಲಿಲ್ಲ. ಶಾಸಕ ಮನಗೂಳಿ ಅವರ ನಿಧನದಿಂದ ಅನಿವಾರ್ಯ ಕಾರಣಕ್ಕಾಗಿ ಈ ಉಪ ಚುನಾವಣೆ ನಡೆಯುತ್ತಿದೆ. ಬಿಜೆಪಿಯ ಆಡಳಿತದಿಂದ ಜನರು ಭ್ರಮನಿರಸಗೊಂಡಿದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ' ಎಂದರು.
ಕಲಬುರಗಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದರು. ಆರ್‌ಎಸ್‌ಎಸ್(RSS) ವಿರುದ್ಧ ಕಿಡಿ:
ಆರ್‌ಎಸ್‌ಎಸ್ ಬಗ್ಗೆ ಮಾತು ಬೆಂಕಿ ಜೊತೆ ಸರಸ ಎನ್ನುವ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ನಾನು ಆರ್.ಎಸ್.ಎಸ್ ವಿರುದ್ಧ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲಿನಿಂದಲೂ ಮಾತನಾಡುತ್ತಲೇ ಬಂದಿದ್ದೇನೆ' ಎಂದು ಗುಡುಗಿದರು.
'ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ'
ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. 'ಹೆಂಡದಂಗಡಿ ಮುಂದೆ ನಿಂತು ಸಿದ್ದರಾಮಯ್ಯ ತಾಲಿಬಾನಿಗಳ ಬಗ್ಗೆ ಮಾತನಾಡಿದಂತೆ ನಾನು ಮಾತನಾಡಲಾರೆ' ಎನ್ನುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಇದನ್ನೂ ಓದಿ:Who is this ಸಿದ್ದರಾಮಯ್ಯ.. ಮಾಜಿ ಸಿಎಂ ಕುಮಾರಸ್ವಾಮಿ ಗರಂ!