ಕಲಬುರಗಿ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಹಿಂದೂ ವಿರೋಧಿಯಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ, ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿಗಳು ಕಿಡಿಕಾರಿದ್ದಾರೆ. ದಲಿತರು, ಹಿಂದುಳಿದವರಿಗೆ ದೇವಸ್ಥಾನಗಳ ಗರ್ಭಗುಡಿಗೆ ಪ್ರವೇಶ ಕೊಟ್ಟಿದ್ದೀರಾ ಎಂಬ ಕುಮಾರಸ್ವಾಮಿಯವರ ಪ್ರಶ್ನೆಗೆ ಸಿದ್ದಲಿಂಗ ಸ್ವಾಮೀಜಿ ತಿರುಗೇಟು ಕೊಟ್ಟಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರು ಹಿಂದು ಸಂಘಟನೆ ಮತ್ತು ಸರ್ಕಾರವನ್ನು ದೂಷಿಸುವ ಬರದಲ್ಲಿ ಮಠ-ಮಂದಿರಗಳನ್ನು ಎಳೆದು ತಂದಿದ್ದಾರೆ. ಕುಮಾರಸ್ವಾಮಿ ಅವರು ಸವರ್ಣೀಯರ ವಿರುದ್ಧ ದಲಿತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ, ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ನೀವು ನಿಮ್ಮ ಮನೆಗಳನ್ನು ದಲಿತರು, ಹಿಂದುಳಿದ ಜನರಿಂದ ಕಟ್ಟಿಸಿಕೊಂಡಿದ್ದೀರಿ. ಆದ್ರೆ, ನಿಮ್ಮ ದೇವರ ಕೋಣೆಗೆ ಎಷ್ಟು ಜನ ದಲಿತರು, ಹಿಂದುಳಿದವರನ್ನು ಬಿಟ್ಟುಕೊಂಡಿದ್ದೀರಿ?. ನೀವು ಸಿಎಂ ಆಗಿದ್ದಾಗ ಮುಜರಾಯಿ ದೇವಸ್ಥಾನಗಳಲ್ಲಿ ಎಷ್ಟು ದಲಿತರಿಗೆ ಗರ್ಭಗುಡಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದೀರಾ? ಎಂಬುದನ್ನು ಬಹಿರಂಗಪಡಿಸಿ ಎಂದರು.
ಸಿದ್ದರಾಮಯ್ಯನವರು ಸ್ವಾಮಿಗಳ ಪೇಠದ ಬಗ್ಗೆ ಮಾತನಾಡಿದಾಗ ಅದನ್ನು ಖಂಡಿಸಿದ್ದೀರಾ. ಆಗ ಸಿದ್ದರಾಮಯ್ಯ ಕನ್ನಡ ಪಂಡಿತ ಅಂತಾ ಅಪಹಾಸ್ಯ ಮಾಡಿದ್ರಿ. ಆದ್ರೀಗ ನೀವೇ ಮಠಗಳ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಉರ್ದು ಪಂಡಿತರಾ? ನೀವು ಯಾವ ಪಂಡಿತರು ಎಂದು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಅನಾವಶ್ಯಕವಾಗಿ ಮಾತನಾಡಿಯೇ ಮಂಡ್ಯದಲ್ಲಿ ನಿಮ್ಮ ಪುತ್ರನ ಸೋಲಿಗೆ ನೀವು ಕಾರಣರಾಗಿದ್ದೀರಿ ಎಂದರು.
ಇದನ್ನೂ ಓದಿ:ಚುನಾವಣೆ ಯಾವಾಗ ನಡೆದರೂ ನಾವು ಸಿದ್ಧ: ಇಡಿ - ಸಿಬಿಐ ಬಿಜೆಪಿ ಅಂಗ ಪಕ್ಷಗಳು ಎಂದ ಕುಮಾರಸ್ವಾಮಿ
ಸ್ವತಃ ನೀವೇ ಮುಖ್ಯಮಂತ್ರಿಗಳಾಗಿದ್ದಾಗ ಈ ನಾಡಿನ ಮಠಾಧೀಶರು ಹಾಗೂ ರಾಜಕಾರಣಿಗಳ ದೂರವಾಣಿ ಕದ್ದಾಲಿಸುವ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ಅಪಚಾರ ಮಾಡಿದ್ದೀರಿ. ಹಿಂದು ದ್ವೇಷ ನಿಮ್ಮ ಕುಟುಂಬದಲ್ಲಿ ಎದ್ದು ಕಾಣುತ್ತಿದೆ. ಈ ಹಿಂದೆ ಹಾಸನದಲ್ಲಿ ಹೆಚ್ ಡಿ ರೇವಣ್ಣನವರು ಹಿಂದು-ಮುಸ್ಲಿಂ ಅಂತಾ ಹೋರಾಟ ಮಾಡಿದರೆ ನಾನು ಸುಮ್ಮನಿರಲ್ಲ ಎಂಬ ಪೌರುಷದ ಮಾತನಾಡಿದರು.
ಆದರೆ, ಈಗ ಹಿಜಾಬ್ ವಿಚಾರವಾಗಿ ಕೋರ್ಟ್ ಆದೇಶ ಪಾಲಿಸುವ ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ಯಾಕೆ ನೀಡ್ತಿಲ್ಲ?. ಹೀಗೆ ಮುಂದುವರೆದರೆ ಮುಂಬರುವ ಚುನಾವಣೆಯಲ್ಲಿ ನಿಮ್ಮ ಪಕ್ಷದಿಂದ ಒಬ್ಬ ಅಭ್ಯರ್ಥಿ ಸಹ ಗೆಲ್ಲುವುದು ಸಂಶಯ. ಕೂಡಲೇ ಕುಮಾರಸ್ವಾಮಿ ಅವರು ಮಠ-ಮಂದಿರಗಳಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.