ಕಲಬುರಗಿ:ಮಹಾರಾಷ್ಟ್ರದಲ್ಲಿ ಮಸೀದಿಗಳ ಮೇಲಿರುವ ಧ್ವನಿವರ್ಧಕವನ್ನು ನಿಷೇಧಿಸುವಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ನಡೆಸುತ್ತಿರುವ ಹೋರಾಟಕ್ಕೆ ಶ್ರೀರಾಮ ಸೇನೆಯ ಬೆಂಬಲವಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ, ಆಂದೋಲ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.
ಯುಗಾದಿ ಹಬ್ಬದ ದಿನ ಮಾತನಾಡಿದ ರಾಜ್ ಠಾಕ್ರೆ ಸಾರ್ವಜನಿಕರಿಗೆ ಉಂಟಾಗುವ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಧ್ವನಿವರ್ಧಕಗಳನ್ನು ಬಳಸದಂತೆ ಹಾಗೂ ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರ ನಿರ್ಧಾರ ಸ್ವಾಗತಾರ್ಹ ಎಂದರು.
'ಕರ್ನಾಟಕದಲ್ಲೂ ಬ್ಯಾನ್ ಮಾಡಿ':ರಾಜ್ಯದಲ್ಲಿಯೂ ಸಹ ಮಸೀದಿಗಳ ಮೇಲೆ ಹಾಕಲಾದ ಧ್ವನಿವರ್ಧಕಗಳಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಧ್ವನಿವರ್ಧಕದಿಂದ ಬರುವ ಸೈರನ್ನಿಂದಾಗಿ ಮಕ್ಕಳು, ವಿದ್ಯಾರ್ಥಿಗಳು ಅದರಲ್ಲೂ ವಯಸ್ಸಾದವರಿಗೆ ಆರೋಗ್ಯ ಸಮಸ್ಯೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಸಹ ಮಸೀದಿಗಳ ಧ್ವನಿವರ್ಧಕಗಳನ್ನು ನಿಷೇಧಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟವನ್ನು ಶ್ರೀರಾಮಸೇನೆಯ ನೇತೃತ್ವದಲ್ಲಿ ಕೈಗೊಳ್ಳಬೇಕಾಗುತ್ತದೆ ಎಂದು ಸಿದ್ಧಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಧ್ವನಿವರ್ಧಕ ತೆಗೆಯದಿದ್ದರೆ ಮಸೀದಿಗಳ ಮುಂದೆ ಹನುಮಾನ್ ಚಾಲೀಸಾ ಹಾಕ್ತೇವೆ: ರಾಜ್ ಠಾಕ್ರೆ