ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳಿಂದ ನಿಷ್ಪಕ್ಷಪಾತ ತನಿಖೆ ಆಗುತ್ತಿಲ್ಲ. ಆರೋಪ ಮಾಡಿದವರಿಗೆ ನೋಟಿಸ್ ನೀಡಿ ಹೆದರಿಸುತ್ತಿದ್ದಾರೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಶರಣ ಪ್ರಕಾಶ ಪಾಟೀಲ್ ಆರೋಪಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್ ಪಿನ್ ದಿವ್ಯಾ ಹಾಗರಗಿಯನ್ನು ಯಾಕಿನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿ ತಕ್ಷಣ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ಪ್ರಕರಣದ ಹಿಂದಿರುವ ಎಲ್ಲರನ್ನೂ ಬಂಧಿಸಬೇಕೆಂದು ಒತ್ತಾಯಿಸಿದರು.
ಪ್ರಿಯಾಂಕ್ ಖರ್ಗೆಯವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಆಡಿಯೋ ಬಿಡುಗಡೆ ಮಾಡಿದ್ರು. ಆದರೆ ಖರ್ಗೆಗೆ ನೋಟಿಸ್ ಕೊಟ್ಟು ಹೆದರಿಸೋದಕ್ಕೆ ಮುಂದಾಗಿದ್ದಾರೆ. ಬಿಜೆಪಿಯವರ ಬೆದರಿಕೆ ತಂತ್ರಕ್ಕೆ ನಾವು ಮಣಿಯೋದಿಲ್ಲ. ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ನಾವಿದ್ದೇವೆ ಎಂದರು.
ಇದನ್ನೂ ಓದಿ:ಹಳೇ ಹುಬ್ಬಳ್ಳಿ ಗಲಭೆ: ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಭೇಟಿ
ಜ್ಞಾನಜ್ಯೋತಿ ಶಾಲೆಯ ಸೆಂಟರ್ ಸಲುವಾಗಿ ಸಂಸದ ಜಾಧವ್ ಪತ್ರ ಕೊಟ್ಟಿದ್ದಾರೆ. ಶಾಲೆ ಶಿಫಾರಸು ಪತ್ರ ಕೊಟ್ಟವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ. ನೋಟಿಸ್ ಕೊಡುವ ಬದಲಾಗಿ ಸ್ವತಃ ಪತ್ರ ಕೊಟ್ಟವರ ರಕ್ಷಣೆಗೆ ಸರ್ಕಾರ ನಿಂತಿದೆ. ಇತ್ತ ಸಿಎಂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಆರೋಪಿ ದಿವ್ಯಾ ಹಾಗರಗಿ ಮನೆಗೆ ಹೋಮ್ ಮಿನಿಸ್ಟರ್ ಉಪಹಾರಕ್ಕೆ ಹೋಗಿದ್ದಕ್ಕೆ ಇದೀಗ ದಿವ್ಯಾ ಅವರ ರಕ್ಷಣೆ ಮಾಡೋದಕ್ಕೆ ಮುಂದಾಗಿದ್ದಾರಾ? ದಿವ್ಯಾ ಹಾಗರಗಿ ಗೃಹ ಸಚಿವರಿಗೆ ಅಷ್ಟು ಕ್ಲೋಸಾ? ಎಂದು ಕಿಡಿಕಾರಿದರು. ಇದೇ ವೇಳೆ ಯಾವುದೇ ಕಾರಣಕ್ಕೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗೋದಕ್ಕೆ ಬಿಡೋದಿಲ್ಲ ಎಂದು ತಿಳಿಸಿದರು.