ಕಲಬುರಗಿ:ಇನ್ನೇನು ಮುಂಗಾರು ಪ್ರಾರಂಭವಾಯಿತೆಂದು ಖುಷಿಯಲ್ಲಿ ರೈತರು ಬಿತ್ತನೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ನೇಗಿಲು ಹೊಡೆದು ಹೊಲಗಳನ್ನು ಹದ ಮಾಡಿ ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ, ಜಿಲ್ಲೆಯ ಅನೇಕ ಕಡೆಗಳಲ್ಲಿ ಸಕಾಲದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಾಗದೆ ರೈತರು ಗೊಂದಲದಲ್ಲಿದ್ದಾರೆ.
ಕೆಲವು ಕಡೆ ರೈತರಿಗೆ ಟೋಕನ್ ನೀಡಲಾಗಿದೆ. ಕೆಲಸ ಬಿಟ್ಟು ದಿನವಿಡೀ ರೈತ ಸಂಪರ್ಕ ಕೇಂದ್ರದ ಎದುರಿಗೆ ಟೋಕನ್ ಹಿಡಿದು ಸರತಿಸಾಲಿನಲ್ಲಿ ನಿಂತರೂ ಸರಿಯಾದ ಸಮಯಕ್ಕೆ ರಸಗೊಬ್ಬರ, ಬಿತ್ತನೆ ಬೀಜ ಸಿಗುತ್ತಿಲ್ಲ. ರೈತರ ಸಮಸ್ಯೆ ಆಲಿಸಬೇಕಾದ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂಂಬುದು ರೈತರ ಆಕ್ರೋಶ.
ರಸಗೊಬ್ಬರ, ಬಿತ್ತನೆ ಬೀಜ ಕೊರತೆ ಇಲ್ಲ:ಜಿಲ್ಲೆಯ ರೈತರಿಗೆ ಸಾಕಾಗುವಷ್ಟು ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಂಗ್ರಹವಿದೆ. ಈಗಾಗಲೇ 13 ಸಾವಿರ ಟನ್ ರಸಗೊಬ್ಬರ ಬಂದಿದೆ. ಒಟ್ಟು 29 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬೇಕು. ಕಳೆದ ವರ್ಷ 25 ಸಾವಿರ ಮೆಟ್ರಿಕ್ ಟನ್ ಬಳಕೆಯಾಗಿತ್ತು. ಸದ್ಯ ನಮ್ಮಲ್ಲಿ ಇನ್ನೂ 2500 ಮೆಟ್ರಿಕ್ ಟನ್ ಗೊಬ್ಬರ ಇದೆ.
ಜಿಲ್ಲೆಯ ಎಲ್ಲಾ ರೈತ ಕೇಂದ್ರಗಳಲ್ಲಿ 18 ಸಾವಿರ ಕ್ವಿಂಟಲ್ನಷ್ಟು ಬೀಜ ಬಾಕಿ ಇದೆ. ಈಗಾಗಲೇ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಗೆ ಸರಬರಾಜು ಮಾಡಲಾಗಿದೆ. ಯಾವುದೇ ರೈತ ಸಂಪರ್ಕ ಕೇಂದ್ರದಲ್ಲಿ ನೂಕು ನುಗ್ಗಲು ಆಗುತ್ತಿಲ್ಲ. ರೈತರಿಗೆ ಟೋಕನ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಇನ್ನಷ್ಟು ರಸಗೊಬ್ಬರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹೇಳುತ್ತಾರೆ.
ಇದನ್ನೂ ಓದಿ :'ಕೃತಕ ರಸಗೊಬ್ಬರ ಅಭಾವ ಸೃಷ್ಟಿ': ಶಾಸಕರ ಸಮ್ಮುಖದಲ್ಲೇ ಅಧಿಕಾರಿಗಳಿಗೆ ರೈತರಿಂದ ತರಾಟೆ