ಕಲಬುರಗಿ:ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯಾಲಯದ ವತಿಯಿಂದ 10 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ.
2019ರ ಡಿಸೆಂಬರ್ 2ರಂದು ಚಿಂಚೋಳಿಯ ಅಪ್ರಾಪ್ತೆ ಮೇಲೆ ಅತ್ಯಚಾರವೆಸಗಿ, ಬಳಿಕ ಕೊಲೆ ಮಾಡಲಾಗಿತ್ತು. ಇಂದು ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾ ನ್ಯಾಯಾಲಯದ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಅಧ್ಯಕ್ಷ ಆರ್.ಜೆ.ಸತೀಶ್ ಸಿಂಗ್ ಚೆಕ್ ಹಸ್ತಾಂತರಿಸಿದ್ದಾರೆ.
ಅಂದಿನ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡ ರಚಿಸಿ, ಸೇಡಂ ಸಿಪಿಐ ಶಂಕರ್ ಗೌಡ ಪಾಟೀಲ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದರು.
ಶಂಕರಗೌಡ ಪಾಟೀಲ್ ಅವರು ಕೇವಲ 24 ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಆ ಬಳಿಕ ಕೇವಲ ಮೂರೇ ತಿಂಗಳಲ್ಲಿ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಹಾಗೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನಿಧಿಯಿಂದ 10 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಧೀಶರಾಗಿದ್ದ ಗೋಪಾಲಪ್ಪ ಎಸ್. ಆದೇಶಿಸಿದ್ದರು. ಆದೇಶದ ಅನ್ವಯ ಈಗ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ.