ಕರ್ನಾಟಕ

karnataka

ETV Bharat / city

ಸಿಟ್ಟಿನ ಕೈಗೆ ಬುದ್ಧಿಕೊಟ್ಟು: 16 ವರ್ಷ ಜೈಲಲ್ಲೇ ಕಳೆದ ಕಲಬುರಗಿ ವ್ಯಕ್ತಿಯ ಮನಪರಿವರ್ತನೆ ಮಾತು - Yavagiri Distric

1983 ರಲ್ಲಿ ಅದ್ಯಾವುದೋ ಕಾರಣಕ್ಕೆ ಮಲ್ಲಣ್ಣ ಪಾಟೀಲ್ ಅವರ ತಂದೆ ಸಿದ್ದಣ್ಣ ಪಾಟೀಲ್ ಕೊಲೆ ನಡೆದಿತ್ತು. ಇದನ್ನು ಅರಗಿಸಿಕೊಳ್ಳಲು ಆಗದ ಅವರ ಮಕ್ಕಳಾದ ಮಲ್ಲಣ್ಣ ಹಾಗೂ ಅವರ ಸಹೋದರ, ಬೇರೆ ಏನನ್ನು ಯೋಚನೆ ಮಾಡದೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಕಾನೂನಅನ್ನು ಕೈಗೆತ್ತಿಕೊಂಡರು. ತಮ್ಮ ಸಹಚರರೊಂದಿಗೆ ಸೇರಿ ತಮ್ಮ ತಂದೆಯ ಕೊಲೆಯ ಪ್ರಮುಖ ಆರೋಪಿಯನ್ನು ಕಲಬುರಗಿಯಲ್ಲಿ ಕೊಲೆಗೈದಿದ್ದರು. ನಂತರ ಜೈಲು ಸೇರಿದ್ದ ಇವರು ಬಿಡುಗಡೆ ಆಗಿದ್ದಾರೆ. ಇದರೊಂದಿಗೆ ಸಹನೆಯ ಪಾಠ ಕಲಿತು ಹೊರಗೆ ಬಂದಿದ್ದಾರೆ.

release-prisoner-mallanna-talk-about-jail-issue
ಖೈದಿಯ ಮನದಾಳದ ಮಾತು

By

Published : May 27, 2021, 6:19 PM IST

ಕಲಬುರಗಿ:ನಾನು ಇಂಜಿನಿಯರಿಂಗ್ ಪದವೀಧರ, ಶಿಕ್ಷಣದ ಜೊತೆಗೆ ರಾಜಕೀಯವಾಗಿಯೂ ಬೆಳೆದಿದ್ದೆ. ಆರ್ಥಿಕವಾಗಿಯೂ ಸಾಕಷ್ಟು ಸದೃಢನಾಗಿದ್ದು, ಆದರೆ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಕ್ಷಣಾರ್ಧದಲ್ಲಿಯೇ ನನ್ನ ಇಡಿ ಜೀವನ ಹಾಳು ಮಾಡಿಕೊಂಡೆ. ಇಂತಹ ಪಶ್ಚಾತ್ತಾಪದ ಮಾತನ್ನಾಡಿದ್ದು ನಿನ್ನೆಯಷ್ಟೇ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಯಾದ ಮಲ್ಲಣ್ಣ ಪಾಟೀಲ್.

ಖೈದಿಯ ಮನದಾಳದ ಮಾತು

ಓದಿ: ಕರ್ತವ್ಯದಲ್ಲಿದ್ದ ಪಿಡಿಒ ಮೇಲೆ ಹಲ್ಲೆ ಪ್ರಕರಣ: ನಾಲ್ವರು ಅಂದರ್​

ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಏವೂರು ಗ್ರಾಮದವರಾದ ಮಲ್ಲಣ್ಣ ಪಾಟೀಲ, ಸಾಕಷ್ಟು ಆಸ್ತಿವಂತರು. ಜಮೀನ್ದಾರರಾಗಿರುವ ಇವರಿಗೆ 70 ಎಕರೆ ಜಮೀನು ಇದ್ದು, ತಂದೆಗೆ ಇಬ್ಬರು ಮಕ್ಕಳು. ಮೇಲಾಗಿ ಇಂಜಿನಿಯರಿಂಗ್ ಪದವೀಧರ, ಮಾತ್ರವಲ್ಲ, ಸುರಪುರ ತಾಲೂಕಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಕಲಬುರಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾಜಕೀಯವಾಗಿಯೂ ಬೆಳೆದಿದ್ದರು. ಹೀಗಿರುವಾಗಲೇ ದುಡುಕಿನಿಂದ ಕೊಲೆಮಾಡಿ ಜೈಲು ಸೇರಿದ್ದರು.

ರಿವೆಂಜ್ ಗಾಗಿ ನಡೆದಿತ್ತು ಕೊಲೆ:

1983 ರಲ್ಲಿ ಅದ್ಯಾವುದೋ ಕಾರಣಕ್ಕೆ ಮಲ್ಲಣ್ಣ ಪಾಟೀಲ್ ಅವರ ತಂದೆ ಸಿದ್ದಣ್ಣ ಪಾಟೀಲ್ ಕೊಲೆ ನಡೆದಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಮಲ್ಲಣ್ಣ ಹಾಗೂ ಅವರ ಸಹೋದರ, ಬೇರೆ ಏನನ್ನು ಯೋಚನೆ ಮಾಡದೆ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಿದ್ದರು. ತಮ್ಮ ಸಹಚರರೊಂದಿಗೆ ಸೇರಿ ತಮ್ಮ ತಂದೆಯ ಕೊಲೆ ಮಾಡಿದ್ದ ಪ್ರಮುಖ ಆರೋಪಿಯನ್ನು ಕಲಬುರಗಿಯಲ್ಲಿ ಹತ್ಯೆ ಮಾಡಿದ್ದರು. ನಂತರ ಮೊದಲ ಬಾರಿ 1989 ರಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗೆ ಬಂದಿದ್ದರು.

ಬಳಿಕ ಜಿಲ್ಲಾ ನ್ಯಾಯಾಲಯ, ನಂತರ ಹೈಕೋರ್ಟ್ ನಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಸೇರಿದ್ದರು. ಒಂದು ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ನಿಂದ ಮತ್ತೆ ಜಾಮೀನು ಪಡೆದು ಹೊರಗೆ ಬಂದಿದ್ದರು. ಅದಾದ ಬಳಿಕ ಸುದೀರ್ಘ 8 ವರ್ಷ ಹೊರಗಡೆ ಇದ್ದು, ಸುಪ್ರೀಂಕೋರ್ಟ್ ನಲ್ಲಿಯೂ ಜೀವಾವಧಿ ಶಿಕ್ಷೆಗೆ ಒಳಗಾಗಿ 2008 ರಲ್ಲಿ ಜೈಲು ಸೇರಿದ್ದರು. ಯುಟಿ ಅವಧಿಯಲ್ಲಿ ಎರಡು ವರ್ಷ, 2008 ನಂತರ ಇಲ್ಲಿಯವರೆಗೆ 14 ವರ್ಷ ಸೇರಿ, ಒಟ್ಟು 16 ವರ್ಷ ಸಜಾ ಅನುಭವಿಸಿದ್ದಾರೆ.

ಜೈಲಿನಲ್ಲಿ ಪರಿವರ್ತನೆ:

ಮಾಡಿದ ತಪ್ಪಿಗೆ ಜೈಲುವಾಸ ಅನುಭವಿಸುತ್ತಲೇ ತಮ್ಮ ತಪ್ಪಿನ ಅರಿವಾಗಿದೆ. ಜೈಲಿನಲ್ಲಿ ಬೇಕರಿ ಕೆಲಸ ಕಲಿತು ಸನ್ನಡತೆ ತೋರಿದ್ದಾರೆ. ಮನ ಪರಿವರ್ತನೆ ಮಾಡಿಕೊಂಡು ದುಡುಕಿನಲ್ಲಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಿದ್ದಾರೆ. ಜೈಲು ವಾಸ ಮಾಡುತ್ತಲೇ ಒಳ್ಳೆ ದಾರಿಯನ್ನ ಕಂಡುಕೊಂಡಿದ್ದೇವೆ ಅನ್ನೋದು ಮಲ್ಲಣ್ಣ ಅವರ ಮಾತು.

ರೈತನಾಗಿ ಉತ್ತಮ ನಾಗರೀಕನಾಗುವೆ:

ಅನಕ್ಷರಸ್ಥನಲ್ಲ, ಇಂಜಿನಿಯರಿಂಗ್ ವಿದ್ಯಾರ್ಹತೆ ಇದ್ದು, ರಾಜಕೀಯವಾಗಿ ಬೆಳೆದಿದ್ದೆ. ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದೆ. ಅನಾಗರಿಕನಂತೆ ಅಂದು ದುಡುಕಿನ ನಿರ್ಧಾರ ತೆಗೆದುಕೊಳ್ಳದಿದ್ದರೆ ಇಂದು ಇಂಜಿನಿಯರ್ ಅಥವಾ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಬೇಕಾಗಿತ್ತು. ಆದರೆ ಕಾನೂನು ಕೈಗೆ ತೆಗೆದುಕೊಂಡು ತಪ್ಪು ಮಾಡಿದ್ದೇವೆ. ಕಾನೂನು ಏನು ಅನ್ನೋದು ಈಗ ಅರಿವಾಗಿದೆ. ಅರ್ಧ ಜೀವನ ಹಾಳಾಗಿದ್ದು, ಇನ್ನುಳಿದ ಬಾಕಿ ಜೀವನವನ್ನು ಯಾವ ಕ್ಷೇತ್ರಕ್ಕೂ ಹೋಗದೆ ಒಕ್ಕಲುತನಕ್ಕೆ ಮಿಸಲಿಡುತ್ತೇನೆ. ಮಾದರಿ ರೈತನಾಗಿ ಉತ್ತಮ ನಾಗರೀಕನಾಗುತ್ತೇನೆ ಎಂದಿರುವ ಮಲ್ಲಣ್ಣ, ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದಾರೆ.

ABOUT THE AUTHOR

...view details