ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಪ್ರಸಕ್ತ 2019-20 ನೇ ಸಾಲಿನಿಂದ ಕಲಬುರಗಿ ವಿಭಾಗ ಕೇಂದ್ರಿತ ಯೋಜನೆಗಳನ್ನು ಕೈಗೊಳ್ಳಲು ಮಂಡಳಿ ಹಂತದಲ್ಲಿಯೇ ಪ್ರಾದೇಶಿಕ ನಿಧಿಯ ಪ್ರಯೋಜನ ಪಡೆದುಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಹೈ.ಕ ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದಸುಬೋಧ್ ಯಾದವ್ಅವರು, ಮಂಡಳಿಗೆ ಹಂಚಿಕೆಯಾದ ಅನುದಾನದ ಪೈಕಿ ಶೇ.6 ರಂತೆ 90 ಕೋಟಿ ರೂ. ಅನುದಾನ ಈ ನಿಧಿಗೆ ಮೀಸಲಿರಿಸಲು ಮಂಡಳಿಯು ನಿರ್ಣಯಿಸಿದೆ. ಈ ರೀತಿಯ ಪ್ರಾದೇಶಿಕ ಅನುದಾನ ಮೀಸಲಿಡುವುದರಿಂದ ಆಯಾ ಜಿಲ್ಲೆಗೆ ಹಂಚಿಕೆಯಾದ ಅನುದಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಉದಾಹರಣೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ನೀಡಲಾಗುವ ಅನುದಾನವನ್ನು ಪ್ರಾದೇಶಿಕ ಅನುದಾನವೆಂದು ಪರಿಗಣಿಸಲಾಗುವುದು. ಇಂತಹ ಯೋಜನೆಗಳಿಗೆ ಜಿಲ್ಲೆಯಿಂದ ಮಾಹಿತಿ ಪಡೆದು ಮಂಡಳಿಯೇ ಖುದ್ದಾಗಿ ಕ್ರಿಯಾ ಯೋಜನೆ ರೂಪಿಸುತ್ತದೆ ಎಂದರು.
ಪ್ರಸಕ್ತ 2019-20ನೇ ಸಾಲಿಗೆ ರಾಜ್ಯ ಸರ್ಕಾರ ಆಯವ್ಯಯದಲ್ಲಿ ಘೋಷಿಸಿದಂತೆ 1,500 ಕೋಟಿ ರೂ. ಅನುದಾನ ಮಂಡಳಿಗೆ ಹಂಚಿಕೆಯಾಗಿದ್ದು, ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಯಾ ಜಿಲ್ಲಾ ಸಲಹಾ ಸಮಿತಿಯು ಕ್ರಿಯಾ ಯೋಜನೆಯನ್ನು ಮಂಡಳಿಗೆ ಸಲ್ಲಿಸಬೇಕು. ಮೂಲ ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಗಳು ಕೆಲವೊಮ್ಮೆ ತಾಂತ್ರಿಕ ಕಾರಣದಿಂದ ಕಾರ್ಯಾನುಷ್ಠಾನಕ್ಕೆ ಬಾರದಿದ್ದಲ್ಲಿ ಇದಕ್ಕೆ ಪರ್ಯಾಯವಾಗಿ ಕಾಮಗಾರಿ ಕೈಗೊಳ್ಳಲು ಹೆಚ್ಚುವರಿಯಾಗಿ 1,000 ಕೋಟಿ ರೂ.ಗಳಿಗೂ ಕ್ರಿಯಾ ಯೋಜನೆಯನ್ನು ಈ ಬಾರಿ ಸಿದ್ದಪಡಿಸಬೇಕಾಗಿದೆ. ಹೀಗೆ ಮಾಡುವುದರಿಂದ ನಿಗದಿತ ಗುರಿ ಸಾಧಿಸಲು ಅನುಕೂಲವಾಗುತ್ತದೆ ಎಂದರು.
ಹೆಚ್ಕೆಆರ್ಡಿಬಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಚುನಾಯಿತ ಜನಪ್ರತಿನಿಧಿಗಳಿಂದಲೇ ಪ್ರಸ್ತಾವನೆ ಪಡೆದು ಕ್ರಿಯಾ ಯೋಜನೆ ರೂಪಿಸಬೇಕೆಂದೇನಿಲ್ಲ, ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಪ್ರಮುಖ ಯೋಜನೆಗಳ ಕುರಿತು ಜಿಲ್ಲಾ ಸಲಹಾ ಸಮಿತಿ ಮೂಲಕ ಪ್ರಸ್ತಾವನೆ ಸಲ್ಲಿಸಬಹುದಾಗಿದೆ ಎಂದರು.
ಮಂಡಳಿಯು ಈ ಹಿಂದೆ ಸಾಂಸ್ಥಿಕ ವಲಯ, ಸಂಘ-ಸಂಸ್ಥೆಗಳ ವಲಯ, ಮೂಲಸೌಕರ್ಯ ವಲಯವೆಂದು ನಿಗದಿಪಡಿಸಿ ಅನುದಾನ ಮೀಸಲಿಡುತಿತ್ತು. ಪ್ರಸಕ್ತ ಸಾಲಿನಿಂದ ಅದೆಲ್ಲವನ್ನು ಮಾರ್ಪಡಿಸಿ ಎರಡು ವಲಯಗಳಲ್ಲಿ ಅಂದರೆ ಸಾಮಾಜಿಕ ವಲಯ ಮತ್ತು ಸಾಮಾಜಿಕವಲ್ಲದ ವಲಯ ಎಂದು ಗುರುತಿಸಿ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಶೇ.70ರಷ್ಟು ಅನುದಾನ ಮೈಕ್ರೋ ಕಾಮಗಾರಿಗೆ ಹಾಗೂ ಶೇ.30 ರಷ್ಟು ಅನುದಾನ ಮ್ಯಾಕ್ರೋ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಶೇ.70ರ ಮೈಕ್ರೋ ನಿಧಿಯಲ್ಲಿ ಸಾಮಾಜಿಕ ವಲಯಕ್ಕೆ ಶೇ.40ರಷ್ಟು ಮತ್ತು ಸಾಮಾಜಿಕವಲ್ಲದ ವಲಯಕ್ಕೆ ಶೇ.60ರಷ್ಟು ಅನುದಾನ ಮೀಸಲಿರಿಸಿದೆ. ಅದೇ ರೀತಿ ಶೇ.30ರ ಮ್ಯಾಕ್ರೋ ನಿಧಿಯಲ್ಲಿ ಸಾಮಾಜಿಕ ವಲಯ ಮತ್ತು ಸಾಮಾಜಿಕವಲ್ಲದ ವಲಯಕ್ಕೆ ತಲಾ ಶೇ.50 ರಷ್ಟು ಅನುದಾನ ಖರ್ಚು ಮಾಡಲಾಗುತ್ತದೆ ಎಂದರು.