ಕಲಬುರಗಿ: ಜಿಲ್ಲೆಯಾದ್ಯಂತ ನಾಲ್ಕನೇ ದಿನವೂ ಮಳೆರಾಯನ ಆರ್ಭಟ ಮುಂದುವರೆಸಿದ್ದು, ಅಪಾರ ಪ್ರಮಾಣದ ಬೆಳೆ ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಹಲವು ಬಡಾವಣೆ, ಗ್ರಾಮಗಳು ಜಲಾವೃತ್ತವಾಗಿವೆ.
ಕಳೆದ ನಾಲ್ಕೂ ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದ ಕಲಬುರಗಿ ಜನ ಅಕ್ಷರಶಃ ಬೇಸತ್ತು ಹೋಗಿದ್ದಾರೆ. ಮಳೆಯಿಂದ ಹಲವು ಹಳ್ಳಿಗಳು ಜಲಾವೃತ್ತವಾಗಿ ಮನೆಗಳು ಕುಸಿದು ಬಿದ್ದಿವೆ. ಪಟ್ಟಣ ಪ್ರದೇಶದಲ್ಲಿಯೂ ಸಹ ಬಡವಾಣೆ ಹಾಗೂ ಮನೆಗಳಿಗೆ ನೀರು ಹೊಕ್ಕು ಚರಂಡಿಗಳು ತುಂಬಿ, ರಸ್ತೆಗಳು ನೀರಿನಿಂದ ಮುಳುಗಿ ಹೋಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ಕೆಲವೆಡೆ ದೇವಸ್ಥಾನಗಳು ಮುಳುಗಡೆಯಾಗಿದೆ.
ಗ್ರಾಮ ಸ್ಥಳಾಂತರಕ್ಕೆ ಒತ್ತಾಯ
ಮಳೆಯಿಂದಾಗಿ ಕೆರೆಗಳು ಉಕ್ಕಿ ಹರಿಯುತ್ತಿದ್ದು, ಗ್ರಾಮಗಳಿಗೆ ಜಲಕಂಟಕ ಎದುರಾಗಿದೆ. ಸೈಯದ್ ಚಿಂಚೋಳಿ ಹಾಗೂ ಕೆರೆಭೋಸಗಾ ಗ್ರಾಮಗಳಿಗೆ ಕೆರೆ ನೀರು ಹೊಕ್ಕಿದ್ದು, ಜನ ಪರದಾಡುತ್ತಿದ್ದಾರೆ. ಇದರಿಂದ ಗ್ರಾಮ ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ.