ಕರ್ನಾಟಕ

karnataka

ETV Bharat / city

ಪಿಎಸ್‌ಐ ನೇಮಕಾತಿ ಹಗರಣ: 2,000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಐಡಿ - JMFC Court

ಲಕ್ಷಾಂತರ ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಬಾಳಿಗೆ ಕೊಳ್ಳಿ ಇಟ್ಟಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಕಲಬುರಗಿಯ 3ನೇ ಜೆಎಂಎಫ್‌ಸಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದರು.

ಪಿಎಸ್‌ಐ ನೇಮಕಾತಿ ಹಗರಣ
ಪಿಎಸ್‌ಐ ನೇಮಕಾತಿ ಹಗರಣ

By

Published : Jul 6, 2022, 10:39 AM IST

ಕಲಬುರಗಿ: ಇಡೀ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲಿ ದೊಡ್ಡ ಸದ್ದು ಮಾಡಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸುದೀರ್ಘವಾಗಿ 2,000 ಪುಟಗಳುಳ್ಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅಕ್ರಮ ಎಸಗಿದವರ ಎದೆಯಲ್ಲಿ ನಡುಕ ಶುರುವಾಗಿದೆ‌‌.

ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಕಲಬುರಗಿ ನಗರದ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು 34 ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿ ಎಫ್‌ಐಆರ್ ದಾಖಲಿಸಿ ಜೈಲಿಗಟ್ಟಿದ್ದಾರೆ. ಇದೀಗ ಸಿಐಡಿ, 34 ಆರೋಪಿಗಳ ವಿರುದ್ಧ ಸುಮಾರು 2,000 ಪುಟಗಳುಳ್ಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದು, ನಿನ್ನೆ ತನಿಖಾಧಿಕಾರಿ ಡಿವೈಎಸ್​ಪಿ ಪ್ರಕಾಶ ರಾಠೋಡ್ ನೇತೃತ್ವದಲ್ಲಿ ಕಲಬುರಗಿ ಮೂರನೇ ಜೆಎಂಎಫ್‌ಸಿ ಕೋರ್ಟ್‌ಗೆ ಬಿಗಿಭದ್ರತೆಯಲ್ಲಿ ಸಲ್ಲಿಸಿದರು.

ಅಕ್ರಮದ ಕೇಂದ್ರಬಿಂದುವಾಗಿರುವ ದಿವ್ಯಾ ಹಾಗರಗಿ ವಿರುದ್ಧ ಏಪ್ರಿಲ್ 10 ರಂದು ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿತ್ತು. ಸಿಐಡಿಗೆ ಪ್ರಕರಣ ಹಸ್ತಾಂತರವಾದ ಬೆನ್ನಲ್ಲೇ ಏಪ್ರಿಲ್ 16 ರಂದು ಸಿಐಡಿ, ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿಯರಾದ ಸುಮಾ, ಸಿದ್ದಮ್ಮ ಮತ್ತು ಸಾವಿತ್ರಿಯನ್ನು ಬಂಧಿಸಿತ್ತು.

ಮೂವರು ಮೇಲ್ವಿಚಾರಕಿಯನ್ನು ಬಂಧಿಸಿದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ತನಿಖಾಧಿಕಾರಿಗಳು, ಅಕ್ರಮಕ್ಕೆ ಸಂಬಂಧಿಸಿದಂತೆ ಶಾಲೆಯ ಒಡತಿ ದಿವ್ಯಾ ಹಾಗರಗಿ, ಪತಿ ರಾಜೇಶ್ ಹಾಗರಗಿ, ಮುಖ್ಯ ಶಿಕ್ಷಕ ಕಾಶಿನಾಥ್‌, ಶಿಕ್ಷಕಿ ಅರ್ಚನಾ, ಕಿಂಗ್‌ಪಿನ್‌ಗಳಾದ ಮಂಜುನಾಥ ಮೇಳಕುಂದಿ, ಆರ್‌ಡಿ ಪಾಟೀಲ್, ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್, ಕೆಎಸ್‌ಆರ್‌ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜಿನಾಥ್ ಬಿರಾದಾರ್, ಡಿವೈಎಸ್​ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ ಮೇತ್ರೆ ಸೇರಿದಂತೆ 34 ಆರೋಪಿಗಳನ್ನು ಬಂಧಿಸಿ, ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಆರೋಪಿಗಳಿಗೆ ಮತ್ತಷ್ಟು ಆತಂಕ ಕಾದಿದೆ.

ಇದನ್ನೂ ಓದಿ:ಪಿಎಸ್ಐ ಅಕ್ರಮದ ಸಿಐಡಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ: ಪ್ರಿಯಾಂಕ್​​ ಖರ್ಗೆ

ABOUT THE AUTHOR

...view details