ಕರ್ನಾಟಕ

karnataka

ETV Bharat / city

ಪಿಎಸ್ಐ ನೇಮಕಾತಿ ಪರೀಕ್ಷಾಅಕ್ರಮ: ಪ್ರಕರಣದ ಕಿಂಗ್‌ಪಿನ್ 18 ದಿನಗಳ ಪಯಣ ಹೇಗಿತ್ತು ಗೊತ್ತಾ? - Divya Hagaragi

ನಿತ್ಯ ಎಸಿಯಲ್ಲಿ ಹಾಯಾಗಿ ಮಲಗುತ್ತಿದ್ದ ದಿವ್ಯಾ, ಸಾಂತ್ವನ ಕೇಂದ್ರದಲ್ಲಿ ಫ್ಯಾನ್ ಗಾಳಿಯಲ್ಲಿ ನಿದ್ದೆಬಾರದೇ ರಾತ್ರಿಯಿಡಿ ಜಾಗರಣೆ ಮಾಡಿದ್ದಾಳೆ. ಇಂದು ಮತ್ತೆ ಸಿಐಡಿ ತಂಡ ವಶಕ್ಕೆ ಪಡೆದು ಡ್ರಿಲ್​ ನಡೆಸಲಿದೆ. ದಿವ್ಯಾ ಮತ್ತು ಗ್ಯಾಂಗ್ ಮಾಡಿದ ಅಕ್ರಮದ ಬಗ್ಗೆ ಮಾಹಿತಿ ಕಲೆ ಹಾಕಲಿದೆ.

divya hagargi
ದಿವ್ಯಾ ಹಾಗರಗಿ

By

Published : Apr 30, 2022, 9:31 AM IST

Updated : Apr 30, 2022, 11:08 AM IST

ಕಲಬುರಗಿ: ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರಾದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ 11 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ‌ಕಸ್ಟಡಿಗೆ ಪಡೆದ ಸಿಐಡಿ ರಾತ್ರಿ ಆಳಂದ ರಸ್ತೆಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದರು. ನಿತ್ಯ ಎಸಿಯಲ್ಲಿ ಹಾಯಾಗಿ ಮಲಗುತ್ತಿದ್ದ ದಿವ್ಯಾ, ಶುಕ್ರವಾರ ರಾತ್ರಿ ಫ್ಯಾನ್ ಗಾಳಿಗೆ ನಿದ್ದೆ ಬಾರದೇ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ.

ಪ್ರಕರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿಯನ್ನು ಗುರುವಾರ ರಾತ್ರಿ ಪುಣೆಯಿಂದ ಬಂಧಿಸಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಕಲಬುರಗಿ ಸಿಐಡಿ ಕಚೇರಿಗೆ ಕರೆತರಲಾಗಿದೆ. ದಿವ್ಯಾ ಹಾಗರಗಿ ಜತೆ ಮೇಲ್ವಿಚಾರಕಿ ಅರ್ಚನಾ, ಸುನೀತಾ ಹಾಗೂ ಇವರಿಗೆ ಆಶ್ರಯ ನೀಡಿದ್ದ ಸೋಲ್ಲಾಪುರ ಮೂಲದ ಉದ್ಯಮಿ ಸುರೇಶ ಕಾಂಟೇಗಾಂವ, ಕಾಳಿದಾಸ, ಚಾಲಕ ಸದ್ದಾಂನನ್ನು ಬಂಧಿಸಿ ಕರೆತರಲಾಗಿತ್ತು.

ಬಳಿಕ ಒಂದಿಷ್ಟು ಪ್ರಾಥಮಿಕ ಕಾರ್ಯವಿಧಾನ ಮುಗಿಸಿ, ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದ ಸಿಐಡಿ, ಸಾಯಂಕಾಲದ ಹೊತ್ತಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದೇ ವೇಳೆ, 14 ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಮುಂದೆ ಸಿಐಡಿ ಮನವಿ ಸಲ್ಲಿಸಿತ್ತು. ನ್ಯಾಯಾಧೀಶರು ಎಲ್ಲ ಆರು ಆರೋಪಿಗಳನ್ನು 11 ದಿನ ಸಿಐಡಿ ಕಸ್ಟಡಿಗೆ ನೀಡಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಪರೀಕ್ಷಾ ಅಕ್ರಮ: ದಿವ್ಯಾ ಹಾಗರಗಿ ಸೇರಿ 6 ಮಂದಿ 11 ದಿನ ಸಿಐಡಿ ಕಸ್ಟಡಿಗೆ

ಸಿಐಡಿ ತಂಡದಿಂದ ಡ್ರಿಲ್​​​:ಆಳಂದ ರಸ್ತೆಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದಿವ್ಯಾಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ(ಶುಕ್ರವಾರ) ಮಧ್ಯಾಹ್ನ ಊಟ ನಿರಾಕರಿಸಿ ಉಪವಾಸವಿದ್ದ ದಿವ್ಯಾ ರಾತ್ರಿ ಅಲ್ಪ ಆಹಾರ ಸೇವನೆ ಮಾಡಿದ್ದಳು. ಇಂದು ಮತ್ತೆ ಸಿಐಡಿ ತಂಡ ವಶಕ್ಕೆ ಪಡೆದು ಡ್ರೀಲ್ ನಡೆಸಲಿದೆ. ದಿವ್ಯಾ ಮತ್ತು ಗ್ಯಾಂಗ್ ಮಾಡಿದ ಅಕ್ರಮದ ಬಗ್ಗೆ ಮಾಹಿತಿ ಕಲೆ ಹಾಕಲಿದೆ.

ಯಾರೋ ನನ್ನ ಫೋಟೋ ತೆಗೆಯುತ್ತಿದ್ದಾರೆ:ಬಂಧಿತ ದಿವ್ಯಾ ಶುಕ್ರವಾರ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಿಐಡಿ ಕಚೇರಿ ಪ್ರವೇಶ ಮಾಡಿದಳು. ನಂತರ ಮುಖಕ್ಕೆ ಕಟ್ಟಿದ ಬಟ್ಟೆ ತೆಗೆದು ಕೊಣೆಯೊಂದರಲ್ಲಿ ಕುಳಿತುಕೊಂಡಿದ್ದಳು. ಈ ವೇಳೆ, ಯಾರೋ ನನ್ನ ಫೋಟೋ ತೆಗೆಯುತ್ತಿದ್ದಾರೆ ಅಂತಾ ಡ್ರಾಮಾ ಮಾಡಿದ್ದಾಳೆ. ಸಿಐಡಿ ಸಿಬ್ಬಂದಿ ಹೊರಬಂದು ನೋಡಿದರೆ ಅಂತಹುದು ಏನು ನಡಿದಿರಲಿಲ್ಲ. ಇದು ಕೇವಲ ಆಕೆಯ ಡ್ರಾಮಾ ಅನ್ನೋದು ಗೊತ್ತಾಗಿ ಸಿಐಡಿ ಸುಮ್ಮನಾದರು.

ಮಕ್ಕಳ ಸಮೇತ ಕುಟುಂಬಸ್ಥರು ದೌಡು:ದಿವ್ಯಾ, ಅರ್ಚನಾ ಹಾಗೂ ಸುನೀತಾಳನ್ನು ಬಂಧಿಸಿ ಕರೆತಂದಿರುವ ಮಾಹಿತಿ ಪಡೆದ ಪೋಷಕರು ಪುಟ್ಟ ಮಕ್ಕಳ ಸಮೇತ ಭೇಟಿಯಾಗಲು ಸಿಐಡಿ ಕಚೇರಿಗೆ ದೌಡಾಯಿಸಿದರು. ಆದರೆ, ಅಧಿಕಾರಿಗಳು ಇವರನ್ನು ಭೇಟಿಯಾಗಲು ಬಿಡಲಿಲ್ಲ. ಕೊನೆಗೆ ದೂರದಿಂದಲೇ ನೋಡಿ ವಾಪಸ್ ತೆರಳಿದರು.

ಫಲಿಸದ ದೈವಶಕ್ತಿ:ದಿವ್ಯಾ ದೈವ ಭಕ್ತೆ. ತಲೆ ಮರೆಸಿಕೊಂಡ 18 ದಿನ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಮಾಡಿದ್ದಾಳೆ. ಮಹಾರಾಷ್ಟ್ರ, ಗುಜರಾತ್‌ನ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾಳೆ. ಎರಡೆರಡು ದಿನ ದೇವಸ್ಥಾನದಲ್ಲಿಯೇ ಕಳೆದಿದ್ದಾಳೆ. ಹೇಗಾದರೂ ಕಾಪಾಡಪ್ಪ ಅಂತಾ ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾರೆ. ಆದರೆ ಅಕ್ರಮದಿಂದ ಹುದ್ದೆ ವಂಚಿತರಾದ ವಿದ್ಯಾರ್ಥಿಗಳ ಶಾಪದ ಮುಂದೆ ದೈವ ಶಕ್ತಿಯ ಪೂಜೆ ಫಲಿಸಿಲ್ಲ, ಕೊನೆಗೂ ದಿವ್ಯಾ ಅರೆಸ್ಟ್​​ ಆಗಿದ್ದಾಳೆ.

18 ದಿನದ ಪಯಣ:ಪಿಎಸ್ಐ ಪರೀಕ್ಷೆ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಏ.10 ರಂದು ಮಧ್ಯಾಹ್ನ ಮನೆಯಿಂದ ಪರಾರಿಯಾದ ದಿವ್ಯಾ ಅಫಜಲಪುರ ಮಾರ್ಗವಾಗಿ ಮಹಾರಾಷ್ಟ್ರದ ಸೋಲಾಪುರಕ್ಕೆ ತಲುಪಿದ್ದಳು. ಅಫಜಲಪುರ ಬಳಿ ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿದ್ದಳು. ಆ ನಂಬರ್ ಇದುವರೆಗೂ ಆನ್ ಆಗಿಲ್ಲ. ಉದ್ಯಮಿ ಸುರೇಶ ಕಾಟೆಂಗಾವ ಸಹಾಯ ಪಡೆದು ತೋಟದ ಮನೆಯಲ್ಲಿ ಎರಡು ದಿನ ತಂಗಿದ್ದಳು. ಇಲ್ಲಿ ಸಿದ್ರಾಮೇಶ್ವರ ದೇವರ ದರ್ಶನ ಪಡೆದಿದ್ದಳು. ನಂತರ ಪೂನಾದಲ್ಲಿ ಐದು ದಿನ ಉಳಿದುಕೊಂಡಿದ್ದಳಂತೆ.

ಬಳಿಕ ಗುಜರಾತ್‌ ತೆರಳಿ ಮೂರು ದಿನ ಅಲ್ಲಿಯೇ ಕಳೆದಿದ್ದಾರೆ. ಗುಜರಾತ್‌ನಲ್ಲಿ ತಂಗಿದ್ದಾಗ ಅಲ್ಲಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿದ್ದಾರೆ. ಏ. 22ರಂದು ಮರಳಿ ಪೂನಾ ಆಗಮಿಸಿ ಬಂಧನವಾಗುವವರೆಗೆ ಪೂನಾ ಹೊರವಲಯದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು. ದಿವ್ಯಾ ಹಾಗರಗಿ ಪರಾರಿಯಾಗುವ ಮುನ್ನ ಮೂರು ಲಕ್ಷ ರೂ. ಹಣ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ಯಾವುದೇ ಎಟಿಎಂ ಅಥವಾ ಬ್ಯಾಂಕ್​​ನಿಂದ ಹಣ ಡ್ರಾ ಮಾಡಿರಲಿಲ್ಲ. ಬ್ಯಾಂಕ್ ಖಾತೆಗಳ ಮೇಲೆ ನಿಗಾ ವಹಿಸಿದ ಸಿಐಡಿಗೆ ಇದು ನಿರಾಶೆ ಮೂಡಿಸಿತ್ತು.

ಕೋಟಿ ಕೋಟಿ ಆಸ್ತಿ ಇದ್ದರೂ ದುರಾಸೆ:ಬಂಧಿತ ಆರೋಪಿ ದಿವ್ಯಾ ಹಾಗರಗಿ ಕುಟುಂಬ ಸಾಕಷ್ಟು ಹಣವಂತರಾಗಿದ್ದಾರೆ. ಕೋಟಿ ಕೋಟಿ ಮೌಲ್ಯದ ಆಸ್ತಿ ಇದೆ. ಹಲವು ಶಾಲಾ ಕಾಲೇಜುಗಳು ಸೇರಿ ಹತ್ತಾರು ವ್ಯವಹಾರಗಳು ಇವೆ. ಕಲಬುರಗಿ ಜಿಲ್ಲೆ ಸುತ್ತಮುತ್ತ ಕೋಟ್ಟಂತರ ರೂ.ಮೌಲ್ಯದ ಆಸ್ತಿ ಇದೆ. ರಾಜಕೀಯವಾಗಿಯೂ ಉತ್ತಮ ಹೆಸರಿತ್ತು. ಇಷ್ಟೆಲ್ಲ ಐಷಾರಾಮಿ ಜೀವನ ಇದ್ದರೂ ಹಣದ ದುರಾಸೆಗೆ ಬಿದ್ದ ದಿವ್ಯಾ, ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾರೆ ಎನ್ನಲಾಗ್ತಿದೆ. ಸದ್ಯ ಸಿಐಡಿ ವಶದಲ್ಲಿರುವ ದಿವ್ಯಾ ಮತ್ತು ಟೀಂಗೆ ಇಂದು ಸಿಐಡಿ ಡ್ರಿಲ್ ನಡೆಸಲಿದೆ. ಅಕ್ರಮ ಪ್ರಕರಣದಲ್ಲಿ ಮತ್ತೆ ಯಾರ ಕೈವಾಡವಿದೆ?, ಅಕ್ರಮದ ಉರುಳು ಮತ್ಯಾರ ಕೊರಳಿಗೆ ಸುತ್ತಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಪಿಎಸ್​ಐ ನೇಮಕಾತಿ ಪ್ರಕರಣ: ಬಂದೋಬಸ್ತ್​ನಲ್ಲಿ ದಿವ್ಯಾ ಹಾಗರಗಿಯನ್ನು ಕಲಬುರಗಿಗೆ ಕರೆ ತಂದ ಸಿಐಡಿ

Last Updated : Apr 30, 2022, 11:08 AM IST

ABOUT THE AUTHOR

...view details