ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಎನ್ನಲಾಗಿರುವ ದಿವ್ಯಾ ಹಾಗರಗಿ ಸೇರಿದಂತೆ ಐವರು ಕಡೆಗೂ ಸಿಐಡಿ ಬಲೆಗೆ ಬಿದ್ದಿದ್ದಾರೆ. ಸಿಐಡಿ ಎಸ್ಪಿ ರಾಘವೇಂದ್ರ ನೇತೃತ್ವದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ 5 ಜನರನ್ನು ಬಂಧಿಸಿ ಕಲಬುರಗಿಗೆ ಕರೆತರಲಾಗುತ್ತದೆ.
ಪುಣೆಯಲ್ಲಿ ದಿವ್ಯಾ ಅಂಡ್ ಟೀಮ್ ಇರುವ ಕುರಿತು ಪತ್ತೆ ಹಚ್ಚಿದ ಸಿಐಡಿ ತಂಡ, ಕಾರ್ಯಾಚರಣೆ ನಡೆಸಿ ದಿವ್ಯಾ ಮತ್ತು ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್, ಮೇಲ್ವಿಚಾರಕಿ ಅರ್ಚನಾ, ಸುನಂದಾ, ಪಿಎಸ್ಐ ಪರೀಕ್ಷಾರ್ಥಿ ಅಭ್ಯರ್ಥಿ ಶಾಂತಾಬಾಯಿ ಅವರನ್ನು ಅರೆಸ್ಟ್ ಮಾಡಿದೆ. ಸದ್ಯ ಎಲ್ಲರನ್ನೂ ಕಲಬುರಗಿಗೆ ಕರೆತರಲಾಗುತ್ತಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಕಲಬುರಗಿ ಸಿಐಡಿ ಕಚೇರಿಗೆ ತಲುಪಲಿದ್ದಾರೆ.
ಗುರುವಾರ ಆರೋಪಿ ಜ್ಯೋತಿ ಪಾಟೀಲ್ ಬಂಧನವಾಗಿತ್ತು. ವಿಚಾರಣೆ ವೇಳೆ ದಿವ್ಯಾ ಸೇರಿ ಎಲ್ಲರೂ ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿರುವುದನ್ನು ಜ್ಯೋತಿ ಪಾಟೀಲ್ ಬಾಯ್ಬಿಟ್ಟಿದ್ದರು. ತಡ ಮಾಡದೇ ರಾತ್ರಿಯೇ ಪುಣೆಗೆ ತೆರಳಿದ ಸಿಐಡಿ ತಂಡ, ಶೋಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.