ಕಲಬುರಗಿ :545 ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ತೆಲೆ ಮರೆಸಿಕೊಂಡಿದ್ದ ದಿವ್ಯಾ ಹಾಗರಗಿ & ಗ್ಯಾಂಗ್, ಇವರಿಗೆ ಆಶ್ರಯ ನೀಡಿದ್ದಮಹಾರಾಷ್ಟ್ರದ ಸೋಲಾಪುರದ ಉದ್ಯಮಿ ಸುರೇಶ್ ಮತ್ತು ಕಾಳಿದಾಸನನ್ನೂ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ದಿವ್ಯಾ ಮತ್ತು ಗ್ಯಾಂಗ್ ಅನ್ನು ಪುಣೆಯಲ್ಲಿ ಬಂಧಿಸಲಾಗಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮದ ಕೇಂದ್ರಬಿಂದು ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಹಾಗೂ ಉದ್ಯಮಿ ಸುರೇಶ ಸುಮಾರು ದಿನಗಳಿಂದ ಪರಿಚಿತರಾಗಿದ್ದು, ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಉದ್ಯಮಿ ಸುರೇಶ್ ಮನೆಯಲ್ಲಿ ತನ್ನ ಗ್ಯಾಂಗ್ ಜತೆ ದಿವ್ಯಾ ಅಲ್ಲಿಯೇ ಆಶ್ರಯ ಪಡೆದಿದ್ದಳು ಎಂದು ತಿಳಿದು ಬಂದಿದೆ.
ತೆಲೆ ಮರೆಸಿಕೊಂಡಿದ್ದ ಆರೋಪಿಗಳು 18 ದಿನಗಳಿಂದ ಮೊಬೈಲ್ ಬಳಕೆ ನಿಲ್ಲಿಸಿದ್ದರು. ಎಲ್ಲರ ನಡುವೆ ಒಂದೇ ಒಂದು ಹ್ಯಾಂಡ್ ಸೆಟ್ ಬಳಕೆ ಮಾಡಿ ಹತ್ತಾರು ಸಿಮ್ ಬದಲಾವಣೆ ಮಾಡುತ್ತಿದ್ದರು. ಪದೇಪದೆ ಆಶ್ರಯ ತಾಣಗಳನ್ನು ಬದಲಾವಣೆ ಮಾಡಿ ಸಿಐಡಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಒಂದು ಮಾಹಿತಿ ಪ್ರಕಾರ 12 ಲಾಡ್ಜ್ಗಳನ್ನು ಬದಲಾವಣೆ ಮಾಡಿದ್ದರಂತೆ. ಜತೆಗೆ ಯಾರನ್ನೂ ಸಂಪರ್ಕಿಸುತ್ತಿರಲಿಲ್ಲ.
ಆದರೆ, ಸಿಐಡಿ ಬಲೆಗೆ ಬಿದ್ದ ಜ್ಯೋತಿ ಪಾಟೀಲ್‌ನ ಒಂದೆರಡು ಬಾರಿ ಸಂಪರ್ಕಿಸಿದ್ದರು. ಇದೇ ಆರೋಪಿಗಳವರೆಗೆ ತಲುಪಲು ಸಿಐಡಿಗೆ ದಾರಿ ಮಾಡಿ ಕೊಟ್ಟಿತ್ತು. ಟವರ್ ಲೋಕೆಷನ್ ಆಧರಿಸಿ ಆರೋಪಿಗಳನ್ನು ತಲುಪಲು ಯಶಸ್ವಿಯಾಗಿದೆ ಸಿಐಡಿ ತಂಡ. ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. ಇದೇ ಶಾಲೆಯ ಒಡತಿ,ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಶಾಲೆಯ ಹೊರಗಡೆ ನಿಂತು ಕಾವಲು ಕಾಯುತ್ತಿದ್ದಳು. ತಪಾಸಣೆಗೆ ಬರುವವರನ್ನು ತಡೆಯುವ ಕೆಲಸ ಮಾಡುತ್ತಿದ್ದಳು. ಒಳಗಡೆ ಅಕ್ರಮ ನಡೆಯುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.