ಕಲಬುರಗಿ: ರಾಜ್ಯದ ಹಿಜಾಬ್, ಕೇಸರಿ ಶಾಲು ವಿವಾದ ತೀವ್ರತೆ ಪಡೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹಿಜಾಬ್ ಬೆಂಬಲಿಸಿ ಜೇವರ್ಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.
ಜೇವರ್ಗಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ಮಾಡಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಹಿಜಾಬ್ ಧರಿಸಿದ ಸಾವಿರಕ್ಕೂ ಅಧಿಕ ಮುಸ್ಲಿಂ ಮಹಿಳೆಯರು ಭಾಗಿಯಾಗಿದ್ದಾರೆ. ನ್ಯಾಯಕ್ಕಾಗಿ ಹೋರಾಟ, ಹಿಜಾಬ್ ನಮ್ಮ ಹಕ್ಕು, ನಮ್ಮ ಹಕ್ಕು ನಮಗೆ ಬೇಕೆ ಬೇಕು ಅಂತ ಘೋಷಣೆ ಕೂಗುತ್ತಾ ರ‍್ಯಾಲಿ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ..
ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಪ್ರತಿಕ್ರಿಯೆ:ಹಿಜಾಬ್ ಹಾಕಿದ್ರೆ ತಪ್ಪಿಲ್ಲ. ತಮ್ಮ ಧರ್ಮ ಹೇಳುವಂತೆ ಮೈತುಂಬ ಬಟ್ಟೆ ಧರಿಸೋದು ತಪ್ಪಾ? ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳೋಕೆ ಈ ವಿಷಯ ಇಟ್ಟುಕೊಂಡು ಕೋಮು ಸಂಘರ್ಷ ತಂದಿಟ್ಟಿದ್ದಾರೆಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಧರಿಸುವುದನ್ನು ಸಮರ್ಥಿಸಿಕೊಂಡರು. ಹಿಜಾಬ್ ಹೆಸರಿನಲ್ಲಿ ಹಿಂಸೆ, ಕೋಮುವಾದ ಹೀಗೆ ಮುಂದುವರಿದರೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರೋದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಹಿಜಾಬ್ಗೆ ವಿರೋಧವಾಗಿ ಕೇಸರಿ ಶಾಲು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅನಾವಶ್ಯಕವಾಗಿ ಹಿಜಾಬ್ ವಿವಾದ ನಡೆಯುತ್ತಿದೆ. ಹಿಜಾಬ್ಗೆ ವಿರೋಧವಾಗಿ ಕೇಸರಿ ಶಾಲು ಹಾಕಿ ವಿದ್ಯಾರ್ಥಿಗಳನ್ನು ಕಾಲೇಜ್ಗೆ ಕಳುಹಿಸುವ ಕೆಲಸ ಆಗ್ತಿದೆ. ಹಿಜಾಬ್ ಹೊಸದಲ್ಲ, ಆದ್ರೆ ಕೇಸರಿ ಶಾಲು ಹೊಸದು. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಶಿಸ್ತಿನ ಪಕ್ಷ ಅಂತ ಹೇಳಿಕೊಳ್ಳುವ ಬಿಜೆಪಿಯಲ್ಲಿ ಒಬ್ಬೊಬ್ಬರು ಒಂದೊಂದು ತರಹ ಮಾತನಾಡುತ್ತಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೋಮು ಸಂಘರ್ಷ ತಂದಿಟ್ಟಿದ್ದಾರೆ ಎಂದು ದೂರಿದರು.