ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ಮತ್ತೆ ಚಾಟಿ ಬಿಸಿದ್ದಾರೆ. ಕಲಬುರಗಿ ಜಿಲ್ಲೆ ಜೊತೆಗೆ ಬೆಂಗಳೂರುವರೆಗೆ ಸಿಐಡಿ ತನಿಖೆ ನಡೆಸಿದರೆ ವಿಧಾನಸೌಧದಲ್ಲಿ ಯಾವೆಲ್ಲಾ ಸಚಿವರಿಗೆ ಪಾಲು ಹೋಗಿದೆ ಎಂಬುದು ಬಯಲಿಗೆ ಬರಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಿಐಡಿ ಅಧಿಕಾರಗಳು ನನಗೆ ಎರಡನೇ ನೋಟಿಸ್ ಜಾರಿ ಮಾಡಿದ್ದಾರೆ. ಸೆಕ್ಷನ್ 91 ಪ್ರಕಾರ ನನಗೆ ಕರೆದಿದ್ದಾರೆ. ಆದರೆ, ನಾನು ಖುದ್ದಾಗಿ ಹಾಜರಾಗಬೇಕು ಅಂತಾ ಆ ಸೆಕ್ಷನ್ ಹೇಳುವುದಿಲ್ಲ. ಬಿಜೆಪಿಯವರಿಗೆ ಕಾನೂನು ಅರಿವು ಕಡಿಮೆ ಇದೆ. ಫೆಬ್ರವರಿಯಲ್ಲಿ ಪ್ರಭು ಚವ್ಹಾಣ್ ಸರ್ಕಾರಕ್ಕೆ ಇದೆ ವಿಷಯವಾಗಿ ಪತ್ರ ಬರೆದಿದ್ದರು. ಬಿಜೆಪಿ ಎಂಎಲ್ಸಿ ಸಂಕನೂರ್ ಲಿಖಿತ ರೂಪದಲ್ಲೇ ಸರ್ಕಾರದ ಗಮನಕ್ಕೆ ತಂದಿದ್ದರು. ಅವರಿಬ್ಬರಿಗೆ ಯಾಕೆ ನೋಟಿಸ್ ಕೊಟ್ಟು ಕರೆಯಿಸಿಲ್ಲ? ಬಿಜೆಪಿಯವರಿಗೆ ಒಂದು ಕಾನೂನು ಕಾಂಗ್ರೆಸ್ನವರಿಗೆ ಒಂದು ಕಾನೂನು ಇದೆಯಾ?, ಯಾವುದೋ ಸೆಕ್ಷನ್ ಹಾಕಿ ನನ್ನನ್ನು ಹೆದರಿಸಲು ಆಗಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.