ಕಲಬುರಗಿ: ಲಾಕ್ಡೌನ್ ನಡುವೆಯೇ ಚಿತ್ತಾಪುರ ತಾಲೂಕಿನ ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆ ಪುನರಾರಂಭಿಸಲು ಆಡಳಿತ ಮಂಡಳಿ ತಯಾರಿ ನಡೆಸಿದೆ ಎನ್ನಲಾಗಿದ್ದು, ಇದಕ್ಕೆ ಪುರಸಭೆ ಸದಸ್ಯರು ಮತ್ತು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಏಷ್ಯಾದಲ್ಲಿಯೇ ಅತಿ ದೊಡ್ಡ ಸಿಮೆಂಟ್ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿರುವ ಎಸಿಸಿ ಲಾಕ್ಡೌನ್ ಹಿನ್ನೆಲೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಪುನರಾರಂಭಕ್ಕೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಸಿಮೆಂಟ್ ತುಂಬಿಕೊಂಡು ಹೋಗಲು ಈಗಾಗಲೇ ಟ್ಯಾಂಕರ್ಗಳು ಸಿದ್ಧಗೊಂಡು ನಿಂತಿವೆ. ಆದರೆ ವಾಡಿ ಪಟ್ಟಣದ ಪಿಲಕಮ್ಮ ಪ್ರದೇಶದಲ್ಲಿ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ಬಾಲಕನ ಪೋಷಕರನ್ನು ಕ್ವಾರಂಟೈನ್ ಮಾಡಲಾಗಿದ್ದು, ಪಿಲಕಮ್ಮ ಪ್ರದೇಶ ಸೇರಿ ನಾಲ್ಕು ವಾರ್ಡ್ಗಳನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ.