ಕಲಬುರಗಿ: ಅನ್ನದಾತರ ಬದುಕು ಹಸನಾಗಿಸಬೇಕಿದ್ದ ನೀರಾವರಿ ಯೋಜನೆಗಳು ಜಿಲ್ಲೆಯಲ್ಲಿ ಕೇವಲ ಹಣ ಹೊಡೆಯುದಕ್ಕೆ ಸೀಮಿತವಾದಂತಾಗಿದೆ. ಕಣ್ಮುಂದೆ ಡ್ಯಾಂಗಳಿದ್ರೂ ರೈತರಿಗೆ ಹನಿ ನೀರು ಸಿಗುತ್ತಿಲ್ಲ. ಎಸ್. ನಾಗರಾಳ ಡ್ಯಾಂ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರೋ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ.
ಕಾಮಗಾರಿ ಹಂತದಲ್ಲಿಯೇ ಕಿತ್ತು ಬಂದ ಎಸ್. ನಾಗರಾಳ ಡ್ಯಾಂ ಚಿಂಚೋಳಿ ತಾಲೂಕಿನ ನಾಗರಾಳ ಡ್ಯಾಂನ ಕಾಲುವೆ ನವೀಕರಣ, ಡ್ರಿಪ್ ಸಿಸಿ ವರ್ಕ್ ಹಾಗೂ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗಾಗಿ ಕೋಟ್ಯಂತರ ಹಣ ಖರ್ಚು ಮಾಡಲಾಗಿದೆ. ಆದ್ರೆ ಅಧಿಕಾರಿಗಳು, ಗುತ್ತಿಗೆದಾರರ ಧನದಾಹಕ್ಕೆ ಕಾಮಗಾರಿ ಹಳ್ಳ ಹಿಡಿದಿದೆ. 80 ಕಿ. ಮೀಟರ್ ಕಾಲುವೆ ನವೀಕರಣಕ್ಕಾಗಿ 120 ಕೋಟಿ ರೂ, ಡ್ರಿಪ್ ಸಿಸಿ ವರ್ಕ್ಗಾಗಿ 38 ಕೋಟಿ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ 18 ಕೋಟಿ ರೂ. ವೆಚ್ಚದಲ್ಲಿ ಸ್ಟಾರ್ ಹಾಗೂ ಆದಿತ್ಯ ಬಿಲ್ಡರ್ಸ್ ಗುತ್ತಿಗೆದಾರರು ಕಳೆದ ಎರಡು ವರ್ಷಗಳಿಂದ ಕಾಮಗಾರಿ ಕೈಗೊಂಡಿದ್ದಾರೆ.
ಆದ್ರೆ ಕಾಮಗಾರಿ ಇನ್ನೂ ಪೂರ್ಣವೇ ಆಗಿಲ್ಲ. ಆಗಲೇ ಮಾಡಿರುವ ಕಾಲವೆ ಹಾಗೂ ಸಿಸಿ ವರ್ಕ್ ಕಿತ್ತುಬಿದ್ದಿದೆ. ಸರಿಯಾಗಿ ಸಿಮೆಂಟ್, ಕಬ್ಬಿಣ ಬಳಸದೆ ಕಳಪೆ ಕಾಮಗಾರಿ ಮಾಡಿರುವ ವಾಸ್ತವ ಚಿತ್ರಣ ಕಣ್ಣಿಗೆ ರಾಚುತ್ತಿದೆ. ಗುತ್ತಿಗೆದಾರರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆದಿದ್ದಾರೆ. ಇದಕ್ಕೆ ಸ್ಥಳೀಯ ಶಾಸಕರು ಸಹಕಾರವೂ ಇದೆ ಎಂದು ಸ್ಥಳೀಯ ಮುಖಂಡರು, ರೈತರು ಗಂಭೀರ ಆರೋಪ ಮಾಡ್ತಿದ್ದಾರೆ.
1973 ಬರಗಾಲ ಸಂದರ್ಭದಲ್ಲಿ ನಾಗರಾಳ ಡ್ಯಾಂ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಜನರಿಗೆ ಕುಡಿಯುವ ನೀರು ಹಾಗೂ ಕೃಷಿಗಾಗಿ ಡ್ಯಾಂ ನೀರು ಸದ್ಬಳಕೆ ಸದುದ್ದೇಶದಿಂದ ಸಾವಿರಾರು ಕೋಟಿ ರೂ ಖರ್ಚು ಮಾಡಿ ಜಲಾಶಯ ನಿರ್ಮಿಸಲಾಗಿದೆ. ಸುಮಾರು 20 ಹೆಕ್ಟೇರ್ ಪ್ರದೇಶದ ಕೃಷಿ ಜಮೀನಿಗೆ ನಾಗರಾಳ ಡ್ಯಾಂ ನೀರು ಬಳಕೆ ಆಗಬೇಕು. ಆದ್ರೆ ಹನಿ ನೀರು ಕೂಡ ರೈತರ ಜಮೀನಿಗೆ ಹರಿದಿಲ್ಲ ಅಂತಾ ರೈತರು ಕಿಡಿಕಾರಿದ್ದಾರೆ.