ಕರ್ನಾಟಕ

karnataka

ETV Bharat / city

ಕಲಬುರಗಿಯಲ್ಲಿ ವರ್ಷದ ಮುಗುವಿಗೆ ಕೊರೊನಾ: ಗ್ರಾಮೀಣ ಭಾಗಕ್ಕೂ ಕಾಲಿಟ್ಟ ಮಹಾಮಾರಿ! - ಕಲಬುರಗಿ ತಾಲೂಕಿನ ಕಲವಗಾ ಗ್ರಾಮದ ಒಂದು ವರ್ಷದ ಮಗುವಿಗೆ ಕೊರೊನಾ ಪತ್ತೆ

ಕಲಬುರಗಿ ತಾಲೂಕಿನ ಕಲವಗಾ (ಕೆ) ಗ್ರಾಮದ ಒಂದು ವರ್ಷದ ಮಗುವಿಗೆ ಕೊರೊನಾ ಇರುವುದು ದೃಢಪಟ್ಟ ಹಿನ್ನೆಲೆ ನಗರ ಪ್ರದೇಶವಲ್ಲದೆ ಗ್ರಾಮೀಣ ಪ್ರದೇಶದ ಜನರೂ ಕೂಡಾ ತೀವ್ರ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ.

ಕೊರೊನಾ
ಕೊರೊನಾ

By

Published : Apr 15, 2020, 5:32 PM IST

ಕಲಬುರಗಿ: ಜಿಲ್ಲೆಯಲ್ಲಿ ಒಂದು ವರ್ಷದ ಮಗುವಿಗೆ ಸೋಂಕು ತಗಲುವ ಮೂಲಕ ಕೊರೊನಾ ಸೋಂಕು ಜಿಲ್ಲೆಯ ಗ್ರಾಮಾಂತರ ಪ್ರದೇಶಕ್ಕೂ ಕಾಲಿಟ್ಟಿದೆ.

ಇನ್ಮುಂದೆ ನಗರ ಪ್ರದೇಶವಲ್ಲದೆ ಗ್ರಾಮೀಣ ಪ್ರದೇಶದ ಜನರೂ ಕೂಡಾ ತೀವ್ರ ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದೆ. ಇಂದು ಕಲಬುರಗಿ ತಾಲೂಕಿನ ಕಲವಗಾ (ಕೆ) ಗ್ರಾಮದ ಒಂದು ವರ್ಷದ ಮಗುವಿಗೆ ಕೊರೊನಾ ಇರುವುದು ದೃಢಪಟ್ಟಿದೆ. ತಂದೆ-ತಾಯಿ ಸೇರಿ ಮಗುವಿನೊಂದಿಗೆ ನೇರ ಸಂಪರ್ಕಕ್ಕೆ ಬಂದವರ ಮೇಲೆ ಇದೀಗ ಜಿಲ್ಲಾಡಳಿತ ತೀವ್ರ ನಿಗಾ ವಹಿಸುತ್ತಿದೆ.

ಏ. 9ರಂದು ಒಂದು ವರ್ಷದ ಮಗು ಏಕಾಏಕಿ ಜ್ವರದಿಂದ ಬಳಲಿದೆ. ಮಗುವನ್ನು ಮೊದಲು ಫರತಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಮಗುವಿನ ತಾಯಿಯ ತವರೂರು ಸರಡಗಿ (ಕೆ) ಗ್ರಾಮಕ್ಕೆ ಮಗು ಹಾಗೂ ತಾಯಿ ತೆರಳಿದ್ದಾರೆ‌. ಜ್ವರ ನಿಲ್ಲದಿದ್ದಾಗ ಅಲ್ಲಿಂದಲೇ ಕಲಬುರಗಿಗೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಕೊರೊನಾ ಲಕ್ಷಣದ ಹಿನ್ನೆಲೆ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ಮಗುವಿಗೆ ಕೊರೊನಾ ಸೋಂಕಿರುವುದು ವರದಿಯಿಂದ ದೃಢಪಟ್ಟಿದೆ.

ಮಗುವಿನ ತಂದೆ-ತಾಯಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಮೇಲ್ನೋಟಕ್ಕೆ ಇವರು ಬೇರೆ ಊರಿಗೆ ಹೋಗಿ ಬಂದಂತೆ ಕಂಡುಬಂದಿಲ್ಲ. ಆದ್ರೂ ಮಗುವಿಗೆ ಕೊರೊನಾ ಸೋಂಕು ತಗಲಿದ್ದು ಹೇಗೆ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ. ಸದ್ಯ ಮಗುವಿನ ಪೋಷಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರಬೇಕಿದೆ. ಈ ಹಿನ್ನೆಲೆ ಗ್ರಾಮದಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ‌.

ನಿನ್ನೆ ಒಂದೇ ದಿನ ಮೂರು ಪಾಸಿಟಿವ್ ಕೇಸ್​ಗಳು ಜಿಲ್ಲೆಯಲ್ಲಿ​ ಕಂಡು ಬಂದಿದ್ದವು. ಇದೀಗ ಮಗು ಸೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇವರಲ್ಲಿ ಮೂರು ಜನರು ಸಾವನ್ನಪ್ಪಿದ್ರೆ, ಮೂವರು ಕೊರೊನಾ ವೈರಸ್​ನಿಂದ ವಾಸಿಯಾಗಿದ್ದಾರೆ‌. ಮೂವರು ಗುಣಮುಖರಾಗಿದ್ದಾರೆ ಎನ್ನುವಷ್ಟರಲ್ಲೇ ಇದೀಗ ನಗರ ಹಾಗೂ ಪಟ್ಟಣ ಪ್ರದೇಶವಲ್ಲದೆ ಗ್ರಾಮೀಣ ಪ್ರದೇಶಕ್ಕೂ ಕೊರೊನಾ ವಕ್ಕರಿಸಿದ್ದು, ಹಳ್ಳಿಯ ಜನರಲ್ಲಿ ಆತಂಕ ಮೂಡಿದೆ.

ABOUT THE AUTHOR

...view details