ಕಲಬುರಗಿ:ಮಹಾಮಾರಿ ಕೊರೊನಾ ಎರಡನೇ ಅಲೆ ಕಟ್ಟಿಹಾಕಲು ಹಗಲಿರುಳು ಶ್ರಮಿಸಿ ಯಶಸ್ವಿಯಾಗಿರುವ ಕಲಬುರಗಿ ಜಿಲ್ಲಾಡಳಿತಕ್ಕೆ ಇದೀಗ ಪ್ರವಾಹ ತಲೆನೋವು ಶುರುವಾಗಿದೆ.
ನೆರೆ ಉಂಟಾದರೆ ಪರಿಸ್ಥಿತಿ ಎದುರಿಸಿ ಜನರ ರಕ್ಷಣೆ ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ. ಪ್ರವಾಹವನ್ನು ಸನ್ನದ್ಧವಾಗಿ ಎದುರಿಸಲು ಜಿಲ್ಲಾಡಳಿತ ಪ್ಲಾನ್ ಮಾಡಿಕೊಂಡು ರಕ್ಷಣಾ ತರಬೇತಿ ಜೊತೆಗೆ ಟ್ರಯಲ್ ಪ್ರಾಕ್ಟೀಸ್ ಮಾಡುತ್ತಿದೆ. ಮುಂದೆ ಪ್ರವಾಹ ಪರಿಸ್ಥಿತಿ ಎದುರಿಸಲು ಕಲಬುರಗಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.
ಓದಿ: ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಳ.. ನದಿ ತೀರದ ರೈತರಲ್ಲಿ ಮತ್ತೆ ಆತಂಕ
ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ಎನ್‌ಡಿಆರ್‌ಎಫ್ ಟೀಂ ನೇತೃತ್ವದಲ್ಲಿ ತರಬೇತಿ ಭರ್ಜರಿಯಾಗಿ ನಡೆದಿದೆ. ವಿಜಯವಾಡದಿಂದ ಆಗಮಿಸಿರುವ ನಾಲ್ವರನ್ನೊಳಗೊಂಡ ಎನ್‌ಡಿಆರ್‌ಎಫ್ ಟೀಂ, ಎಸ್ಡಿಆರ್ಎಫ್ನ 45 ಜನ ಹಾಗೂ ಹೋಂ ಗಾರ್ಡ್ 30 ಸಿಬ್ಬಂದಿಗೆ ರಕ್ಷಣಾ ಕಾರ್ಯಾಚರಣೆಯ ತರಬೇತಿ ನೀಡಲಾಗುತ್ತಿದೆ. ಕಲಬುರಗಿ ನಗರದ ಶರಣಬಸವೇಶ್ವರ ಅಪ್ಪಾ ಕೆರೆಯಲ್ಲಿ ತರಬೇತಿ ನೀಡಲಾಗುತ್ತಿದ್ದು, ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆಯ ಅಣಕು ಕಾರ್ಯಾಚರಣೆ ಸಹ ನಡೆಸಲಾಯಿತು.