ಕಲಬುರಗಿ: ಜೇವರ್ಗಿ ತಾಲೂಕು ಕೇಂದ್ರದಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ನರಿಬೋಳ ಗ್ರಾಮ ಒಂದ್ರೀತಿ ನಡುಗಡ್ಡೆಯಂತಾಗಿ ಇಲ್ಲಿನ ಜನ ಅನುಭವಿಸ್ತಿರುವ ಯಾತನೆ ಹೇಳತೀರದಾಗಿದೆ. ತಮ್ಮ ಪಕ್ಕದ ಊರಾದ ಚಾಮನಾಳ ಗ್ರಾಮಕ್ಕೆ ತೆರಳಬೇಕಾದ್ರೆ ದೋಣಿ ಅಥವಾ ಆಳವಾದ ನೀರಿನಲ್ಲಿ ಈಜಿಕೊಂಡು ಹೋಗಬೇಕು.
ಹೀಗಾಗಿ, ಜನರ ಒತ್ತಡಕ್ಕೆ ಮಣಿದು ಭೀಮಾ ನದಿಗೆ 66 ಕೋಟಿ ರೂ. ವೆಚ್ಚದ ಬೃಹತ್ ಸೇತುವೆ ನಿರ್ಮಾಣ ಮಾಡುವುದಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿ ಮುಗಿಯುವ ಹಂತಕ್ಕೆ ಬಂದಾಗ ಇದೀಗ ಕೆಲಸ ಸ್ಥಗಿತಗೊಳಿಸಲಾಗಿದೆ.
ಇನ್ಯಾವಾಗ ಈ ಸೇತುವೆ ಕಾಮಗಾರಿ ಮುಗಿಯುತ್ತೋ ಏನೋ.. ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಜಗದೀಶ್ ಶೆಟ್ಟರ್ ಸರ್ಕಾರದ ಅವಧಿಯಲ್ಲಿ 66 ಕೋಟಿ ರೂಪಾಯಿ ಹಣ ಇಡಲಾಗಿತ್ತು. ಕೋಟಿ ಕೋಟಿ ರೂ. ಖರ್ಚಾದರೂ ಸಹ ಈವರೆಗೆ ಕಾಮಗಾರಿ ಪೂರ್ಣಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಒಡೆದ ಬೋಟಿನಲ್ಲಿ ಜನ ಮತ್ತು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ನದಿ ದಾಟುತ್ತಿದ್ದರು. ಈ ಕುರಿತು ಮಾಧ್ಯಮಗಳು ಮಾಡಿದ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಯಂತ್ರದ ಬೋಟ್ ವ್ಯವಸ್ಥೆ ಕಲ್ಪಿಸಿದೆ.
ಬ್ರಿಡ್ಜ್ ನಿರ್ಮಾಣವಾದ್ರೆ ನರಿಬೋಳ ಗ್ರಾಮದಿಂದ ಚಿತ್ತಾಪುರ ಮತ್ತು ವಾಡಿ ಪಟ್ಟಣಗಳಿಗೆ ತೆರಳಲು ಕೇವಲ ಎಂಟು ಕಿಲೋಮೀಟರ್ ಆಗಲಿದೆ. ಆದ್ರೆ, ಸೇತುವೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ 60 ಕಿಲೋಮೀಟರ್ ಸುತ್ತು ಹಾಕಿಕೊಂಡು ಓಡಾಡುವ ಅನಿವಾರ್ಯತೆ ಉಂಟಾಗಿದೆ. ಇಷ್ಟಾದ್ರೂ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿರೋದಕ್ಕೆ ಶಾಸಕರು ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ:'ವಾಹ್..! ನೀನು ಇದನ್ನು ಹೇಗೆ ಕಲಿತೆ?': ಜಪಾನಿ ಬಾಲಕನ ಮಾತಿನಿಂದ ಸಂತಸಗೊಂಡ ಮೋದಿ