ಕಲಬುರಗಿ:ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಕಲಬುರಗಿ - ಯಾದಗಿರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ ಪಾಟೀಲ ಗೆಲುವಿನ ನಗೆ ಬೀರುವ ಮೂಲಕ ಎರಡನೇ ಬಾರಿ ವಿಧಾನ ಪರಿಷತ್ ಪ್ರವೇಶಿಸಲಿದ್ದಾರೆ.
ಕೇವಲ 149 ಮತಗಳ ಅಂತರದಿಂದ ಪಾಟೀಲ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಜಿ ಪಾಟೀಲ ಅವರು 3,452 ಮತಗಳು ಪಡೆದರೆ, ಕಾಂಗ್ರೆಸ್ನ ಶಿವಾನಂದ ಪಾಟೀಲ 3,303 ಮತಗಳು ಪಡೆದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಲ್ಲಿಕಾರ್ಜುನ 16 ಮತಗಳನ್ನು ಪಡೆದಿದ್ದಾರೆ. ಚಲಾವಣೆಗೊಂಡಿರುವ 7,069 ಮತಗಳಲ್ಲಿ 298 ಮತಗಳು ತಿರಸ್ಕೃತಗೊಂಡಿವೆ.
ಕಳೆದ ಬಾರಿ 804 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿ.ಜಿ ಪಾಟೀಲ ಅವರು ಈ ಬಾರಿ ಕೇವಲ 149 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಭಾರೀ ಪೈಪೋಟಿ ನೀಡಿದ್ದಾರೆ. ಮೊದಲ ಸುತ್ತಿನ ಮತ ಏಣಿಕೆಯಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಬಿ.ಜಿ. ಪಾಟೀಲ ಗೆಲುವು ಸಾಧಿಸಿದರು.
ಪಕ್ಷದ ಗೆಲುವು: ವಿಜೇತ ಅಭ್ಯರ್ಥಿ ಪಾಟೀಲ್
ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿ.ಜಿ ಪಾಟೀಲ್, ಇದು ನನ್ನೊಬ್ಬನ ಗೆಲುವಲ್ಲ, ಬಿಜೆಪಿ ಕಾರ್ಯಕರ್ತರು, ಶಾಸಕರು ಹಾಗೂ ಮುಖಂಡರ ಗೆಲುವಾಗಿದೆ. ಈ ಬಾರಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿತ್ತು. ಆದರೆ, ಅಲ್ಪ ಮತಗಳ ಅಂತರದಿಂದ ಗೆಲುವಾಗಿದೆ. ಎಲ್ಲಿ ತಪ್ಪಾಗಿದೆ ಅನ್ನೊದನ್ನ ಸರಿಪಡಿಸಿಕೊಳ್ಳುತ್ತೇವೆ ಎಂದರು.