ಕಲಬುರಗಿ: ಪಿಎಸ್ಐ ಅಕ್ರಮ ನೇಮಕ ಪ್ರಕರಣದಲ್ಲಿ ಗೃಹ ಸಚಿವರು ಯಾರನ್ನು ಸೇಫ್ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಆದರೆ, ಪ್ರಕರಣದಲ್ಲಿ ಗೃಹ ಸಚಿವರೇ ಬಲಿಪಶು ಆಗುವುದಂತೂ ಪಕ್ಕಾ. ಇದರಿಂದ ಅವರ ಕೆರಿಯರ್ ಹಾಳಾಗುತ್ತದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಕುರಿತು ಸರ್ಕಾರಕ್ಕೆ ಪ್ರೆಶ್ನೆಗಳ ಸುರಿಮಳೆಗೈದು ಗೃಹಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರು ನನಗೆ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ಅವರ ಸರ್ಟಿಫಿಕೇಟ್ ಬೇಡವೆಂದಿದ್ದರು.
ಆದ್ರೀಗ ಅವರ ಪಕ್ಷದ ಶಾಸಕ ಯತ್ನಾಳ್ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಪರೀಕ್ಷೆ ಬರೆದ 57 ಸಾವಿರ ಅಭ್ಯರ್ಥಿಗಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದಿದ್ದರೆ ರಾಜೀನಾಮೆ ಕೊಟ್ಟು ಕುರ್ಚಿ ಬಿಟ್ಟು ಹೋಗಬೇಕಿತ್ತು. ಅಧಿಕಾರದ ಮೋಹದಿಂದ ಅಥವಾ ಯಾರನ್ನೋ ರಕ್ಷಿಸಲು ಅವರು ಹೀಗೆ ಮಾಡುತ್ತಿದ್ದಾರೋ ಏನೋ ಗೊತ್ತಿಲ್ಲ. ಆದರೆ, ಇದರಿಂದ ಅವರ ಭವಿಷ್ಯ ಹಾಳಾಗುತ್ತದೆ ಎಂದರು.
ಕಾನ್ಸ್ಟೇಬಲ್ ನೇಮಕಾತಿಯಲ್ಲೂ ಅಕ್ರಮ ನಡೆದಿದೆಯೆಂಬ ಶಂಕೆ ವ್ಯಕ್ತಪಡಿಸಿದರು. ಅಲ್ಲದೇ ಕಾನ್ಸ್ಟೇಬಲ್ ನೇಮಕಾತಿಯಲ್ಲಿ ಅಕ್ರಮವೆಸಗಿದವರೆ ಪಿಎಸ್‌ಐ ಅಕ್ರಮದಲ್ಲೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಇನ್ನೂ ಪ್ರಕರಣದಲ್ಲಿ ಬಂಧಿಸಲಾದ ದಿವ್ಯಾ ಹಾಗರಗಿ ಮತ್ತು ಆರ್‌ಡಿ ಪಾಟೀಲ್ ಕಿಂಗ್‌ಪಿನ್ ಎಂದು ಹೇಳ್ತಿದ್ದಾರೆ. ಆದರೆ, ಪ್ರಮುಖ ಕಿಂಗ್‌ಪಿನ್‌ಗಳು ಬೇರೆ. ಅವರು ಬೆಂಗಳೂರಿನಲ್ಲೇ ಇದ್ದು ಅವರನ್ನು ಹೊರತರಬೇಕು ಎಂದರು.