ಕಲಬುರಗಿ:ಮಾಧ್ಯಮದವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸುದ್ದಿಯನ್ನು ಹೆಚ್ಚು ಬಿತ್ತರ ಮಾಡುತ್ತಿಲ್ಲ. ಬಿಜೆಪಿ ಅಧ್ಯಕ್ಷರಾದ್ರೂ ಅವರಿಗೆ ಪಕ್ಷದಲ್ಲಿ, ಮಾಧ್ಯಮದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರು ಕಟೀಲ್ ಅವರನ್ನು ಸೈಡ್ ಲೈನ್ ಮಾಡಿದ್ದಾರೆ. ಕಟೀಲ್ಗಿಂತಲೂ ಯತ್ನಾಳ್ ಸುದ್ದಿಗಳು ಹೆಚ್ಚು ಬಿತ್ತರವಾಗ್ತಿವೆ. ಹಾಗಾಗಿ ಸುದ್ದಿ ಬಿತ್ತರವಾಗದೆ ಇರೋದ್ರಿಂದ ವ್ಯಕ್ತಿ ಹತಾಶರಾದ್ರೆ ದಾರಿ ತಪ್ಪುವುದು ಸಹಜ. ದಾರಿ ತಪ್ಪಿದಾಗ ಕೆಲವರು ಮದ್ಯಪಾನ, ಡ್ರಗ್ಸ್ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ಈ ರೀತಿಯ ಹೇಳಿಕೆ ನೀಡ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಇತ್ತೀಚಿಗೆ ನಳಿನ್ಕುಮಾರ್ ಕಟೀಲ್ ಅವರ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ್ದಾರೆ. ಇವರು ಮಾತನಾಡೋದನ್ನು ನೋಡಿದ್ರೆ ನನಗೆ ಅನುಮಾನ ಬರುತ್ತೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಡ್ರಗ್ಸ್ ಸೇವನೆ ಹೆಚ್ಚಾಗ್ತಿದೆ. ದೇಶಾದ್ಯಂತ ಬಿಜೆಪಿ ನಾಯಕರೇ ಡ್ರಗ್ಸ್ ಸೇವನೆಯಲ್ಲಿ ಬಂಧಿತರಾಗಿದ್ದಾರೆ ಎಂದು ಆರೋಪಿಸಿದರು.
ಕಟೀಲ್ ನಿಮಗೆ ನಿಜವಾಗಲು ಶಕ್ತಿ ಇದ್ದರೆ ರಾಹುಲ್ ಗಾಂಧಿಯನ್ನು ಪ್ರಶ್ನೆ ಮಾಡಬೇಡಿ. ಅಮಿತ್ ಶಾ ಅವರಿಗೆ ಕೇಳಿ, ಬೊಮ್ಮಾಯಿ ಸರ್ಕಾರಕ್ಕೆ ಕೇಳಿ. ಕಳೆದ ತಿಂಗಳು ಗುಜರಾತ್ನಲ್ಲಿ ಅದಾನಿಗೆ ಸೇರಿದ ಖಾಸಗಿ ಬಂದರ್ನಲ್ಲಿ ಡ್ರಗ್ಸ್ ಸಿಕ್ಕಿದ್ದು, ಇದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬರುತ್ತಿದೆ. ಯುವಕರಿಗೆ ಉದ್ಯೋಗ ಕೊಡಿ ಅಂದ್ರೆ ನಶೆ ಕೊಡ್ತಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಡ್ರಗ್ಸ್ ಹಾವಳಿ ಹೆಚ್ಚಾಗ್ತಿದೆ ಅಂತ ಹೇಳಿದ್ದಾರೆ. ಕಳೆದ ಏಳು ವರ್ಷಗಳಿಂದ ಇವರದ್ದೇ ಸರ್ಕಾರ ಆಳ್ವಿಕೆಯಲ್ಲಿದೆ. ಆದ್ರೆ ಡ್ರಗ್ಸ್ ದಂಧೆಗೆ ಕಡಿವಾಣ ಹಾಕೋಕೆ ಆಗ್ತಿಲ್ಲ ಎಂದು ಟೀಕಿಸಿದ್ದಾರೆ.