ಕಲಬುರಗಿ :ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಮ್ಮ ಗನ್‌ಮ್ಯಾನ್ ಹಯ್ಯಾಳ ದೇಸಾಯಿ ಬಂಧನ ಕುರಿತಾಗಿ ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರುವರೆ ವರ್ಷಗಳಿಂದ ಹಯ್ಯಾಳ ಅವರು ನಮ್ಮ ಬಳಿ ಉತ್ತಮ ಗನ್‌ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಪಿಎಸ್‌ಐ ಪರೀಕ್ಷೆ ಬರೆದು ಪಾಸಾಗಿದ್ದೆ ಎಂದು ನನ್ನ ಬಳಿ ಹೇಳಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಗನ್‌ಮ್ಯಾನ್ ಹಯ್ಯಾಳ ದೇಸಾಯಿ ಬಂಧನ ಕುರಿತಾಗಿ ಶಾಸಕ ಎಂ.ವೈ ಪಾಟೀಲ್ ಪ್ರತಿಕ್ರಿಯೆ ನೀಡಿರುವುದು.. ನಂತರ ನಮ್ಮ ಪಕ್ಷದ ಮುಖಂಡರೇ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರು ಸಲ್ಲಿಸಿದ್ದರು. ಅದಕ್ಕಾಗಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. 50 ಜನ ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ನೀಡಿತ್ತು. 50 ಜನರ ಲಿಸ್ಟ್‌ನಲ್ಲಿ ನಮ್ಮ ಗನ್‌ಮ್ಯಾನ್ ಹೆಸರು ಕೂಡ ಇತ್ತು. ಸಿಐಡಿ ಅಧಿಕಾರಿಗಳ ನೋಟಿಸ್ ಮೇರೆಗೆ ಓಎಮ್‌ಆರ್‌ಶೀಟ್, ಹಾಲ್ ಟಿಕೆಟ್ ತೆಗೆದುಕೊಂಡು ವಿಚಾರಣೆಗೆ ಹಾಜರಾಗಿದ್ದ.
ನಿನ್ನೆ(ಗುರುವಾರ) ಮದುವೆ ಕಾರ್ಯಕ್ಕೆ ಹೋಗುವಾಗ ನಗರದ ರಾಮ ಮಂದಿರ ಬಳಿ ಸಿಐಡಿ ಅಧಿಕಾರಿಗಳು ನಮ್ಮ ಕಾರು ನಿಲ್ಲಿಸಿ ಮಾಹಿತಿ ನೀಡಿ ಗನ್‌ಮ್ಯಾನ್‌ನನ್ನ ವಶಕ್ಕೆ ಪಡೆದಿದ್ದಾರೆ. ಹಣ ನೀಡಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ, ಗನ್‌ಮ್ಯಾನ್‌ಗೆ ನಾನು 10 ಲಕ್ಷ ರೂ. ಹಣ ನೀಡಿದ್ದೇನೆ ಎಂಬುವುದು ಶುದ್ಧ ಸುಳ್ಳು ಎಂದು ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಒಂದು ವೇಳೆ ಈ ವಿಚಾರದಲ್ಲಿ ಸಿಐಡಿ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದರೆ ಹೋಗುತ್ತೇನೆ ಎಂದು ಶಾಸಕರು ತಿಳಿಸಿದರು.
ಗನ್ಮ್ಯಾನ್ಗಾಗಿ ಐಜಿಪಿಗೆ ಪತ್ರ : ಗನ್‌ಮ್ಯಾನ್ ಬಂಧನ ಹಿನ್ನೆಲೆ ಹೊಸ ಗನ್‌ಮ್ಯಾನ್ ನೀಡುವಂತೆ ಐಜಿಪಿಗೆ ಪತ್ರ ಬರೆಯುತ್ತೇನೆ. ಯಾವುದೇ ಹಗರಣದಲ್ಲಿ ಭಾಗಿಯಾಗಿರಬಾರದು. ಶುದ್ಧ ಹಸ್ತ ಮತ್ತು ಪ್ರಾಮಾಣಿಕ ಗನ್‌ಮ್ಯಾನ್ ಒದಗಿಸಲು ಐಜಿಪಿಗೆ ಮನವಿ ಮಾಡುತ್ತೇನೆ ಎಂದು ಎಂ.ವೈ ಪಾಟೀಲ್ ಹೇಳಿದರು.
ಇದನ್ನೂ ಓದಿ:PSI ನೇಮಕಾತಿ ಅಕ್ರಮ: ಕೈ ಶಾಸಕರ ಗನ್‌ಮ್ಯಾನ್ ಸೇರಿ ಇಬ್ಬರು ಕಾನ್ಸ್ಟೇಬಲ್ ಬಂಧನ