ಕಲಬುರಗಿ :ಆಡಂಬರದ ಹುಟ್ಟುಹಬ್ಬ ಆಚರಣೆ ಬದಲಾಗಿ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಿ ಗ್ರಾಮಸ್ಥರ ಕುಂದು ಕೊರತೆ ಬಗೆಹರಿಸುವ ಮೂಲಕ ಮಾದರಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಜೇವರ್ಗಿ ಶಾಸಕ ಮತ್ತು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್ ನಿರ್ಧರಿಸಿದ್ದಾರೆ.
ಕೊರೊನಾ, ಲಾಕ್ಡೌನ್, ಅತಿವೃಷ್ಟಿ-ಅನಾವೃಷ್ಟಿಯಿಂದ ನಾಡಿನ ಜನ ಕಂಗಾಲಾಗಿದ್ದಾರೆ. ತಮ್ಮ ಮತಕ್ಷೇತ್ರವಾದ ಜೇವರ್ಗಿ ತಾಲೂಕಿನಲ್ಲಿ ಭೀಮಾನದಿ ಪ್ರವಾಹದಿಂದ ರೈತರು ಬೆಳೆದ ಬೆಳೆ ಹಾಳಾಗಿದೆ. ಮನೆ ಕಳೆದುಕೊಂಡು ಜನ ಬೀದಿಗೆ ಬಿದ್ದು ಸಂಕಷ್ಟದ ದಿನ ಕಳೆಯುತ್ತಿದ್ದಾರೆ. ಹಾಗಾಗಿ, ಜನವರಿ 29ರಂದು ತಮ್ಮ ಹುಟ್ಟುಹಬ್ಬವನ್ನು ಜನರ ನೋವಿನಲ್ಲಿ ಭಾಗಿಯಾಗುವ ಮೂಲಕ ಆಚರಿಸುವುದಾಗಿ ಹೇಳಿದ್ದಾರೆ.
ಓದಿ-ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಇಬ್ಬರು ಕಿಂಗ್ಪಿನ್ಗಳು ಅಂದರ್
ಹುಟ್ಟುಹಬ್ಬದ ಮುನ್ನಾ ದಿನವಾದ ಜ.28ರಂದು ಜೇವರ್ಗಿ ತಾಲೂಕಿನ ಜೇರಟಗಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ಗ್ರಾಮಸ್ಥರ ಅಳಲು ಆಲಿಸುವ ತವಕ ಇದೆ. ಗ್ರಾಮದಲ್ಲಿ ಮೊಕ್ಕಾಂ ಹೂಡಿ ಜನರ ಅಹವಾಲು ಪಡೆದು ಅದೇ ದಿನ ರಾತ್ರಿ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮದಲ್ಲಿಯೇ ಸಭೆ ನಡೆಸಿ ಅಲ್ಲಿಯೇ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಾಗುವುದು.
ಹುಟ್ಟುಹಬ್ಬಕ್ಕೆ ಪ್ರಾರಂಭಗೊಂಡ ಗ್ರಾಮ ವಾಸ್ತವ್ಯ ಇನ್ಮುಂದೆ ಪ್ರತಿ ತಿಂಗಳು ಒಂದು ಗ್ರಾಮದಲ್ಲಿ ಮೊಕ್ಕಾಂ ಹೂಡಿ ಜನರ ಕಷ್ಟ-ನಷ್ಟ, ನೋವು- ನಲಿವಿನಲ್ಲಿ ಪಾಲ್ಗೊಳ್ಳುವ ಯೋಜನೆ ರೂಪಿಸಲಾಗಿದೆ ಎಂದರು.
ಈ ಬಾರಿ ಹಿತೈಶಿಗಳು, ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನನ್ನ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಶುಭ ಕೊರಿ ಫ್ಲೆಕ್ಸ್ ಹಾಕುವುದು, ಹೂ-ಹಾರ ತುರಾಯಿ ಸೇರಿ ಯಾವುದೇ ಅನಗತ್ಯ ದುಂದು ವೆಚ್ಚ ಮಾಡದೇ ಕಷ್ಟದಲ್ಲಿರುವ ಜನರಿಗೆ ಹಣ ನೀಡಿ, ಅವರ ಕಷ್ಟಕ್ಕೆ ಸ್ಪಂದಿಸಿ ಅವರ ನೋವಿನಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದಾರೆ.