ಕಲಬುರಗಿ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ತಂದೆಯವರು ಸಿಎಂ ಆಗಿ ಕೆಲಸ ಮಾಡಿದ್ದಾರೆ. ಬೊಮ್ಮಾಯಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಸಿಎಂ ಆಗ್ತೀರಾ ಎಂಬ ಪ್ರಶ್ನೆಯ ಕುರಿತು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿರುವುದು.. ಕಲಬುರಗಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮುರುಗೇಶ್ ನಿರಾಣಿ ಮುಂದೆ ಸಿಎಂ ಆಗ್ತಾರೆ ಎಂಬ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ಸಿಎಂ ಆಗುವ ಮಾತೇ ಬರುವುದಿಲ್ಲ. ನಾನು ಆ ಆಸೆ ಇಟ್ಟುಕೊಂಡಿಲ್ಲ. ಬೊಮ್ಮಾಯಿ ಅವರೇ ನಮ್ಮ ಸಿಎಂ. 2023ರಲ್ಲಿ ಅವರ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ.
2023ರಲ್ಲಿ 125ಕ್ಕಿಂತ ಹೆಚ್ಚು ಸೀಟ್ಗಳನ್ನು ಗೆಲ್ಲುವ ವಿಶ್ವಾಸ ಇದೆ. 125ಕ್ಕಿಂತ ಹೆಚ್ಚು ಸೀಟು ಬಂದ ಮೇಲೆ ಸಂಘ ಪರಿವಾರ, ಹೈಕಮಾಂಡ್ ಯಾರು ಸಿಎಂ ಆಗಬೇಕು ಅಂತಾ ತೀರ್ಮಾನ ಮಾಡುತ್ತಾರೆ ಎಂದರು.
ಸದ್ಯ ನಾನಂತು ಸಿಎಂ ಆಗುವ ಆಸೆಯಿಟ್ಟುಕೊಂಡಿಲ್ಲ. ಆ ಕನಸು ಕೂಡ ಕಂಡಿಲ್ಲ. ಮುಂದೆ ನನಗೆ ಪಕ್ಷ, ಶಾಸಕ ಸ್ಥಾನಕ್ಕೆ ನಿಲ್ಲಬೇಡ, ಪಕ್ಷದ ಕೆಲಸ ಮಾಡಿಕೊಂಡು ಇರಲು ಹೇಳಿದ್ರೂ ಅದಕ್ಕೂ ಸಿದ್ದವಾಗಿದ್ದೇನೆ ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ ನೀಡಿದರು.
ಕೊರೊನಾ 3ನೇ ಅಲೆ ಎದುರಿಸಲು ಸರ್ಕಾರ ಸಮರ್ಥವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಆರೋಗ್ಯ ಸಚಿವರು ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೆ ರೀತಿಯಲ್ಲಿ ತೊಂದರೆಯಾಗದ ಹಾಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಪರಿಷತ್ ಚುನಾವಣೆಗೆ ಜೆಡಿಎಸ್ ಬೆಂಬಲ ನೀಡುವುದರ ಬಗ್ಗೆ ಪ್ರತಿಕ್ರಿಯಿಸಿದ ನಿರಾಣಿ, ದೊಡ್ಡ ದೊಡ್ಡವರ ಲೆಕ್ಕದಲ್ಲಿ ಬೆಂಬಲ ನೀಡುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಜೆಡಿಎಸ್ ಬೆಂಬಲ ನೀಡುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಜೆಡಿಎಸ್ ಪಕ್ಷದ ಮುಖಂಡರು ಹಾಗೂ ನಮ್ಮ ಪಕ್ಷದ ಮುಖಂಡರು ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಇದನ್ನೂ ಓದಿ:ಅಂಬೇಡ್ಕರ್ ಪ್ರತಿಮೆ ತೆರವು : ಕತ್ತು ಕೊಯ್ದುಕೊಂಡ ಅಭಿಮಾನಿ