ಕಲಬುರಗಿ:ಅಪ್ರಾಪ್ತೆಯನ್ನು ಮುಂಬೈಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯನ್ನು ಕಲಬುರಗಿ ರೈಲು ನಿಲ್ದಾಣದಲ್ಲಿ (Kalaburgi Railway Station) ವಶಕ್ಕೆ ಪಡೆಯಲಾಗಿದೆ. ಅಲ್ಲದೇ, 12 ವರ್ಷದ ಬಾಲಕಿಯನ್ನು ಸಹ ರಕ್ಷಣೆ ಮಾಡಲಾಗಿದೆ.
ಮಹಾರಾಷ್ಟ್ರ ಮೂಲದ ವಿವೇಕ್ ಎಂಬಾತ ಬೆಂಗಳೂರಿನ ಕ್ಯಾಂಟೀನ್‌ವೊಂದರಲ್ಲಿ ತರಕಾರಿ ಕಟಿಂಗ್ ಕೆಲಸ ಮಾಡುತ್ತಿದ್ದ ಬಾಲಕಿಗೆ ಕೆಲಸದ ಆಮಿಷವೊಡ್ಡಿದ್ದನಂತೆ. ಅಲ್ಲದೇ ದೆಹಲಿಯಲ್ಲಿ ಹೆಚ್ಚಿನ ಹಣ ಗಳಿಸಬಹುದು. ತನ್ನೊಂದಿಗೆ ಬಂದರೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಪುಸಲಾಯಿಸಿದ್ದಾನೆ. ಇದನ್ನು ನಂಬಿದ ಬಾಲಕಿಯ ಮನೆಯವರು ಆಕೆಯನ್ನು ಈತನೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ವಿವೇಕ್ ಆಕೆಯನ್ನು ದೆಹಲಿಗೆ ಕರೆದೊಯ್ಯುವ ಬದಲು ಮುಂಬೈಗೆ ಕರೆದುಕೊಂಡು ಹೋಗುತ್ತಿದ್ದ.
ಮಾರ್ಗಮಧ್ಯೆ ಅನುಮಾನಗೊಂಡ ಬಾಲಕಿ ಕಲಬುರಗಿ ಸಮೀಪಿಸುತ್ತಿದ್ದಂತೆ ವಿವೇಕ್ನೊಂದಿಗೆ ತಗಾದೆ ತೆಗೆದಿದ್ದಾಳೆ. ಈ ವೇಳೆ ವಿವೇಕ್ ದೆಹಲಿ ಬೇಡ ಮುಂಬೈಗೆ ಹೋಗೋಣವೆಂದು ಸಮಜಾಯಿಷಿ ಕೊಡಲು ಯತ್ನಿಸಿದನಂತೆ. ಆದರೆ ಆತನೊಂದಿಗೆ ಜಗಳವಾಡಿದ ಬಾಲಕಿ, ಕಲಬುರಗಿ ರೈಲು ನಿಲ್ದಾಣದಲ್ಲಿ ಇಳಿದಳು. ಆ ಬಳಿಕ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಗಮನಿಸಿ, ವಿಚಾರಿಸಿದ ಸಾರ್ವಜನಿಕರು ಚೈಲ್ಡ್ ಲೈನ್ ಅಧಿಕಾರಿಗಳ ಗಮನಕ್ಕೆ ತಂದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.