ಕಲಬುರಗಿ :ಪಿಡಿಒ ಕಾರು ಡಿಕ್ಕಿ ಹೊಡೆದ ಪರಿಣಾಮ ಗ್ರಾಮಸ್ಥನೋರ್ವ ಸಾವನ್ನಪ್ಪಿದ ಘಟನೆ ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬಾಬು ದಸ್ತಗೀರ್ ಮುಲಗೆ (60) ಮೃತಪಟ್ಟಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ದಶರತ್ ಪಾತ್ರೆ ಅವರ ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸಂತೆ ವಿಚಾರವಾಗಿ ಗ್ರಾಮಸ್ಥರು ಹಾಗೂ ಪಿಡಿಒ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಗಾಬರಿಗೊಂಡ ಪಿಡಿಒ ತಮ್ಮ ಕಾರು ಚಾಲಕನೊಂದಿಗೆ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಗಾಬರಿಯಲ್ಲಿ ಕಾರು ಚಲಾಯಿಸುವಾಗ ಚಾಲಕ ಗ್ರಾಮದ ಬಾಬು ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.