ಕಲಬುರಗಿ:ಕೃಷಿ ಕಾಯ್ದೆಗಳನ್ನು ವಾಪಸ್(Repeal of farm laws) ಪಡೆದಿರುವ ಪ್ರಧಾನಿ ಮೋದಿ(PM Modi) ಅವರಿಗೆ ನಿಜವಾಗಿಯೂ ರೈತರ ಪರ ಕಾಳಜಿ ಇಲ್ಲ. ಮುಂದೆ ನಡೆಯುವ ಪಂಚರಾಜ್ಯಗಳ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕಾಗಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ ಎಂದು ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Rajyasabha Opposition Leader Mallikarjuna Kharge) ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ಮಾಡಿದ ಕಾನೂನುಗಳು ಸರಿ ಇವೆ ಎಂಬ ಭಾವನೆ ಈಗಲೂ ಪ್ರಧಾನಿ ಮೋದಿ ಅವರದ್ದಾಗಿದೆ. ಸಂಪುಟದಲ್ಲಿ ಚರ್ಚಿಸದೇ ಕಾಯ್ದೆಗಳನ್ನು ಹಿಂತೆಗೆದುಕೊಂಡಿದ್ದಾರೆ. ಮೋದಿ ತಮಗೆ ತೋಚಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದಲ್ಲಿ 700ಕ್ಕೂ ಅಧಿಕ ರೈತರು ಪ್ರಾಣತ್ಯಾಗ ಮಾಡಿದ್ದಾರೆ. ಅವರ ಕುಟುಂಬಗಳು ಬೀದಿಗೆ ಬಿದ್ದಿವೆ. ಅವರಿಗೆ ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದರು. ಹೋರಾಟದಿಂದ ದೇಶದಲ್ಲಿ ಕೃಷಿ ಉತ್ಪನ್ನ ಕುಂಠಿತವಾಗಿದೆ. ರೈತರ ಆದಾಯವೂ ಕಡಿಮೆಯಾಗಿದೆ. ಇದು ದೇಶದ ಆರ್ಥಿಕತೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಖರ್ಗೆ ಹೇಳಿದರು.
ತಾವು ಮಾಡಿದ್ದೆಲ್ಲವನ್ನೂ ದೇಶ ಮತ್ತು ಪ್ರಪಂಚ ಒಪ್ಪಿಕೊಳ್ಳುತ್ತದೆ ಅನ್ನುವ ಭ್ರಮೆ ಮೋದಿ ಅವರ ತಲೆಯಲ್ಲಿದೆ. ರೈತರ ಬಗ್ಗೆ ಅವರಿಗೆ ನಿಜವಾದ ಕಾಳಜಿ ಇದ್ದಿದ್ರೆ ಮೊದಲೇ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದರು. ಈಗ ತೆಗೆದುಕೊಂಡ ನಿರ್ಧಾರ ಕೇವಲ ರಾಜಕೀಯ ಆಧಾರಿತ, ಚುನಾವಣೆ ಹಿನ್ನೆಲೆಯ ನಿರ್ಣಯ ಎಂದು ಟೀಕಿಸಿದರು.