ಕಲಬುರಗಿ:ತವರು ಮನೆಗೆ ಕಳಿಸಲಿಲ್ಲ ಎಂಬ ಕಾರಣಕ್ಕೆ ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ, ತಾಯಿಯೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕಲಬುರಗಿಯ ಪಂಚಶೀಲ ನಗರದಲ್ಲಿ ನಡೆದಿದೆ.
ಈ ಘಟನೆಯಲ್ಲಿ ತಾಯಿ ದೀಕ್ಷಾ ವಸಂತ ಶರ್ಮಾ (26), ಮಗಳು ಸಿಂಚನಾ (2) ಸಾವನ್ನಪ್ಪಿದ್ದಾರೆ. ಮೂರು ವರ್ಷದ ಮಗ ಧನಂಜಯ್ಗೆ ಸುಟ್ಟ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಮೂಲತಃ ಕಾಳಗಿ ತಾಲೂಕಿನ ದೀಕ್ಷಾ ಅವರನ್ನು ಇಲ್ಲಿನ ಪಂಚಶೀಲ ನಗರದ ವಸಂತ ಶರ್ಮಾಗೆ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ದೀಕ್ಷಾಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಮತ್ತು ತವರು ಮನೆಗೆ ಕಳುಹಿಸುತ್ತಿರಲಿಲ್ಲ ಎನ್ನಲಾಗಿದೆ.
ಮಕ್ಕಳು ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡಲಿಲ್ಲ: ಸೋಮವಾರ ಕೂಡ ತವರು ಮನೆಗೆ ಹೋಗಲು ತಯಾರಾದಾಗ ಗಂಡನ ಮನೆಯಲ್ಲಿ ಅವಕಾಶ ನೀಡಲಿಲ್ಲವಂತೆ. ಇದೇ ಕಾರಣಕ್ಕೆ ಮಧ್ಯಾಹ್ನ ದೀಕ್ಷಾ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಮಕ್ಕಳು ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದೇ ಆಟಿಕೆ ವಸ್ತುಗಳಿಗೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾಳೆ.
ಗಂಡನ ಮನೆಯವರೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ದೀಕ್ಷಾ ಕುಟುಂಬದವರು ಆರೋಪಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ. ಈ ಕುರಿತು ಸ್ಪೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸತ್ತಿದ್ದಾರೆ.
ಇಂಥದ್ದೇ ಘಟನೆಗಳು..:ಶನಿವಾರ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ ಇಂಥದ್ದೇ ಹೃದಯವಿದ್ರಾವಕ ಘಟನೆ ನಡೆದಿತ್ತು. ಇಬ್ಬರು ಮಕ್ಕಳೊಂದಿಗೆ ಗೃಹಣಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವತ್ತಿನ ದಿನವೇ ಶಹಬಾದ್ ಪಟ್ಟಣದಲ್ಲಿ ನದಿಗೆ ಜಿಗಿದು ಆರು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆಗಳು ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ಮರುಕಳಿಸಿದ್ದು ಜನ ದಂಗಾಗುವಂತೆ ಮಾಡಿದೆ.
ಇದನ್ನೂ ಓದಿ:ಪ್ರೀತಿಸಿ ಮದುವೆಯಾಗಿ ಪತ್ನಿ ವಿರುದ್ಧ ಜೀವ ಬೆದರಿಕೆ ದೂರು ದಾಖಲಿಸಿದ ಹುಬ್ಬಳ್ಳಿ ವೈದ್ಯ