ಕಲಬುರಗಿ: ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೂಕ ಬಸವಣ್ಣ ಆಗಿದ್ದಾರೆ. ಭಜರಂಗದಳ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದೆ. ಇವರನ್ನು ನಿಯಂತ್ರಿಸಲಾಗುತ್ತಿಲ್ಲವೇಕೆ? ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್, ಹಲಾಲ್ ನಂತರ ಈಗ ಮಸೀದಿಗಳ ಮೇಲಿನ ಮೈಕ್ಗಳ ತೆರವಿಗೆ ಹಿಂದೂ ಪರ ಸಂಘಗಳು ಒತ್ತಾಯಿಸುತ್ತಿವೆ. ಮಸೀದಿಗಳ ಮೇಲಿನ ಮೈಕ್ ಬಳಿಕೆಗೆ ವಾಯುವ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಇದು ಮಂದಿರ ಹಾಗೂ ಚರ್ಚುಗಳಿಗೂ ಕೂಡ ಅನ್ವಯಿಸುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಸರ್ಕಾರ ಜಾರಿಗೆ ತರಲಿ ಎಂದರು.
ಮೈಕ್ಗಳ ವಿಚಾರವನ್ನು ಮುಂದಿಟ್ಟುಕೊಂಡು ಭಜರಂಗದಳ ಮಾತನಾಡುತ್ತಿದೆ. ಎಲ್ಲವನ್ನೂ ಮಾತನಾಡಲು ಇವರು ಯಾರು?. ಯಾರು ಹಲಾಲ್ ಪ್ರಮಾಣಪತ್ರ ತಗೊಂಡಿಲ್ಲ ಹೇಳಿ?. ಅಂಬಾನಿ ತಗೊಂಡಿಲ್ವಾ?. ಅದು ವ್ಯಾಪಾರ ಅದರ ಪಾಡಿಗೆ ಬಿಟ್ಟುಬಿಡಲಿ. ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿದೆ. ಅಡುಗೆ ಅನಿಲ ಬೆಲೆ ಒಂದು ಸಾವಿರ ದಾಟಿದೆ. ಶಿರಸಿಯಲ್ಲಿ ಒಂದು ಲೀಟರ್ ಪೆಟ್ರೋಲ್ಗೆ 111 ರೂ. ಆಗಿದೆ. ಸಿಎಂ ಎಲ್ಲಿದ್ದಾರೆ?, ಸರ್ಕಾರ ಎಲ್ಲಿದೆ?, ಅದರ ಬಗ್ಗೆ ಮಾತನಾಡಲಿ ನೋಡೋಣ ಎಂದು ಕಿಡಿಕಾರಿದರು.
ತೈಲ ಹಾಕಿಸುವುದು ನಿಲ್ಲಿಸಿ:ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ದೇಶಗಳಿಂದ ಆಮದಾಗುತ್ತಿರುವ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುವುದನ್ನು ನಿಲ್ಲಿಸುವ ಮೂಲಕ ನೈಜ ಹಿಂದುತ್ವವನ್ನು ಮೆರೆಯಲಿ ಎಂದು ಸವಾಲು ಎಸೆದ ಪ್ರಿಯಾಂಕ್, ಮುಖ್ಯಮಂತ್ರಿ ಬಸವಣ್ಣ ಮೂಕರಾಗಿರುವುದಕ್ಕೆ ಇದೆಲ್ಲಾ ನಡೆಯುತ್ತಿದೆ ಎಂದು ಟೀಕಿಸಿದರು.