ಕಲಬುರಗಿ:ದೇಶದಲ್ಲಿ ಬಿಜೆಪಿ ಜನರಿಂದ ಪಿಕ್‌ಪಾಕೆಟ್ ಮಾಡೋದು ಶುರು ಮಾಡಿದೆ. ಬಿಜೆಪಿಯವರು ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಜನರ ಪಿಕ್ ಪಾಕೆಟ್ ಮಾಡುತ್ತಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಪಂಚರಾಜ್ಯ ಚುನಾವಣೆ ಮುಗಿಯೋವರೆಗೂ ಸುಮ್ಮನಿದ್ದು, ಈಗ ಎಲೆಕ್ಷನ್ ಮುಗಿದ ಮೇಲೆ ಮತ್ತೆ ಬೆಲೆ ಏರಿಕೆ ಮಾಡಿದ್ದಾರೆ. ಜನರ ಆದಾಯ ಮಾತ್ರ ಇರುವಷ್ಟೇ ಇದೆ. ಬೆಲೆಗಳು ಗಗನಕ್ಕೆ ಏರಿವೆ. ಖರ್ಚು ಹೆಚ್ಚಾಗಿ ಜನರು ತಾಳ್ಮೆ ಕಳೆದುಕೊಳ್ಳುವ ಸಮಯ ಸೃಷ್ಟಿಯಾಗುತ್ತಿದೆ. ಬೆಲೆ ಏರಿಕೆ ಹಾಗೂ ಬಿಜೆಪಿಯವರ ಪಿಕ್‌ಪಾಕೆಟ್ ವಿರೋಧಿಸಿ ರಾಜ್ಯಮಟ್ಟದಲ್ಲಿ ವ್ಯಾಪಕ ಹೋರಾಟ ನಡೆಸಲು ತಿರ್ಮಾನಿಸಲಾಗಿದೆ. ಇಷ್ಟರಲ್ಲೇ ಹೋರಾಟದ ರೂಪು-ರೇಷೆ ತಯಾರಿಸಿ ಪ್ರಕಟಿಸುವುದಾಗಿ ಡಿಕೆಶಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯದಲ್ಲಿ ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಆಗದಂತೆ ಸೆಸ್ ಅನ್ನು ರಾಜ್ಯ ಸರ್ಕಾರ ಭರಿಸಲು ಸಿಎಂ ಅವರಿಗೆ ಆಗ್ರಹಿಸುವುದಾಗಿ ಡಿಕೆಶಿ ಅವರು ಹೇಳಿದ್ದು, ರಾಜ್ಯದಲ್ಲಿಯೂ ಬಿಜೆಪಿ ಜನರ ಲೂಟಿಗೆ ಇಳಿದಿದೆ. ಬಿಡಿಎ ಜಾಗಕ್ಕೆ ಸ್ಕ್ವಾಯರ್ ಫೀಟ್ ಲೆಕ್ಕದಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿದೆ ಅಂತ ಡಿಕೆಶಿ ಆರೋಪಿಸಿದರು.
ನೋ ಕಾಂಗ್ರೆಸ್ ವಿತ್‌ಔಟ್ ಗಾಂಧಿ ಫ್ಯಾಮಿಲಿ :ನಮ್ಮನ್ನು ಕಷ್ಟಕಾಲದಲ್ಲಿ ಗಾಂಧಿ ಕುಟುಂಬ ಉಳಿಸಿದೆ. ಎರಡು ಬಾರಿ ಮನಮೋಹನ್ ಸಿಂಗ್ ಅವರನ್ನು ಕರೆದು ಪ್ರಧಾನಿ ಮಾಡಿದ ಕುಟುಂಬ ಇದು. ಗಾಂಧಿ ಕುಟುಂಬ ಇಲ್ಲ ಅಂದ್ರೆ ಕಾಂಗ್ರೆಸ್ ಇಲ್ಲ, 'ನೋ ಕಾಂಗ್ರೆಸ್ ವಿತ್‌ಔಟ್ ಗಾಂಧಿ ಫ್ಯಾಮಿಲಿ' ಅಂತ ಡಿಕೆಶಿ ಪ್ರತಿಪಾದಿಸಿದರು.
ಪಠ್ಯಪುಸ್ತಕದಲ್ಲಿ ಭಗವದ್ಗೀತೆ ವಿಚಾರ:ಕಾಂಗ್ರೆಸ್ ಭಗವದ್ಗೀತೆ ವಿರೋಧಿ ಅಲ್ಲ. ರಾಜೀವ್ ಗಾಂಧಿ ಪ್ರಧಾನಿ ಇದ್ದಾಗ ದೂರದರ್ಶನದಲ್ಲಿ ರಾಮಾಯಣ ಮಹಾಭಾರತ ಬಗ್ಗೆ ತೋರಿಸಿ ಭಗವದ್ಗೀತೆ ಬಗ್ಗೆ ಜನರಿಗೆ ತಲುಪಿಸಿದ್ದೇ ಕಾಂಗ್ರೆಸ್ ಪಕ್ಷ ಎಂದರು. 'ಯದಾ ಯದಾ ಹೀ ಧರ್ಮಸ್ಯ' ಶ್ಲ್ಯೋಕ ಹೇಳಿದ ಡಿಕೆಶಿ, ಇದೇನು ಬಿಜೆಪಿ ಅವರು ನನಗೆ ಹೇಳಿಕೊಟ್ಟಿದ್ದಾ? ಅಂತ ಪ್ರಶ್ನೆ ಮಾಡಿದರು.
ಬಿಜೆಪಿಯವರು ಏನು ಮಾಡಿರೋದಲ್ಲ ಕಾಂಗ್ರೆಸ್ ಮಾಡಿದ್ದು. ಧರ್ಮ ಯಾವುದಾದ್ರೂ ತತ್ವ ಒಂದೇ, ದೇವರು ಹಲವು ನಾಮ ಹಲವು, ಅನೇಕ ಧರ್ಮಗಳಲ್ಲಿ ಒಳ್ಳೆಯ ವಿಚಾರಗಳಿವೆ ಅವುಗಳನ್ನು ಅಳವಡಿಸಿಕೊಳ್ಳಬೇಕು. ಈಗ ಹಿಂದುತ್ವ ತಮ್ಮ ಆಸ್ತಿ ಎಂಬಂತೆ ಬಿಜೆಪಿ ಹೇಳುತ್ತಿದೆ ಎಂದರು. ಇದೇ ವೇಳೆ, ಮಹಾರಾಷ್ಟ್ರದ ಶಿವಸೇನಾ ನಾಯಕ ಸಂಜಯ್ ರಾವತ್ ಅವರ ಬೆಳಗಾವಿ ಫೈಲ್ಸ್ ಎಂಬ ವಿವಾದಿತ ಪೋಸ್ಟ್ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ ಎದ್ದು ನಡೆದರು.