ಕಲಬುರಗಿ: ಸದಾ ಒತ್ತಡದ ಮಧ್ಯೆ ಪ್ರಕರಣಗಳ ಪತ್ತೆಗೆ ಬೆನ್ನತ್ತುವ ಪೊಲೀಸರು ದಿನದ 24 ಗಂಟೆ ಕರ್ತವ್ಯ ಪಾಲನೆಯಲ್ಲಿ ನಿರತರಾಗಿರುತ್ತಾರೆ. ಇವುಗಳ ಮಧ್ಯೆಯೇ ಒಂದಿಷ್ಟು ಸಮಯ ಬಿಡುವು ಮಾಡಿಕೊಂಡು ವೃತ್ತಿ ಜೊತೆಗೆ ಪರಿಸರ ಸಂರಕ್ಷಣೆಯ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿರುವ ಪೊಲೀಸ್ ಅಧಿಕಾರಿ ರಾಜಶೇಖರ ರಾಠೋಡ. ಇವರ ಪರಿಸರ ಪ್ರೇಮ ಎಲ್ಲರ ಗಮನ ಸೆಳೆದಿದೆ.
ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರ ಠಾಣೆಯ ಪಿಎಸ್ಐ ಆಗಿರುವ ರಾಜಶೇಖರ, ತಮ್ಮ ಠಾಣೆ ಆವರಣದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ತಂತಿ ಬೇಲಿ ನಿರ್ಮಿಸಿಕೊಂಡು ಉದ್ಯಾನವನ ನಿರ್ಮಾಣ ಮಾಡಿದ್ದಾರೆ. ಗಾಣಗಾಪುರದಲ್ಲಿರುವ ಮೈಸೂರು ಶಾಖಾ ಮಠದ ಪೂಜ್ಯರು ಪಿಎಸ್ಐ ಅವರೊಂದಿಗೆ ಕೈ ಜೋಡಿಸಿದ್ದಾರೆ. ದೂರದ ರಾಜಮಂಡ್ರಿ, ಶ್ರೀಶೈಲ ಹಾಗೂ ಮುಂಬೈ ನಗರಗಳಿಂದ ಸುಮಾರು 26ಕ್ಕೂ ಅಧಿಕ ಬಗೆಯ ಸಸಿಗಳನ್ನು ತರಿಸಿಕೊಂಡು ಸಾವಯವ ಗೊಬ್ಬರ ಬಳಕೆ, ಹನಿ ನೀರಾವರಿ ಪದ್ಧತಿಯೊಂದಿಗೆ ಗಿಡಗಳ ಪೋಷಣೆ ಮಾಡುತ್ತಿದ್ದಾರೆ.
ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಸಿಗಳಿಗೆ ಆದ್ಯತೆ:ಠಾಣೆ ಆವರಣವನ್ನು ಹಸಿರುಮಯ ಮಾಡುವುದರ ಜತೆಗೆ ಮನುಷ್ಯನ ಆರೋಗ್ಯ ವೃದ್ಧಿಸಬಲ್ಲ ಗಿಡಮೂಲಿಕೆ ಬೆಳೆ ಬೆಳೆಯಲು ಆದ್ಯತೆ ನೀಡಿದ್ದಾರೆ. ಔದುಂಬರ, ಬಿಲ್ವ ಪತ್ರೆ, ಅಶ್ವತ್ಥ, ಚಂಪಕ, ಹೊಂಗೆ, ಅರ್ಜುನ ಮರ, ಕದಂಬ, ಮಾವು, ಆಲದ ಮರ, ಬಿದಿರು, ಬೇವು, ಶಂಕೇಶ್ವರ, ಕಾಶ್ಮೀರಿ ತೇಗ, ನೇರಳೆ, ಸೀಬೆ ಹಣ್ಣು, ಸೀತಾ ಅಶೋಕ ಮರ, ಕಾಜು, ಬದಾಮ್, ಬೆಟ್ಟದ ಹೂವು, ಮೆಹಂದಿ ಗಿಡ, ಬನ್ನಿ ಗಿಡ, ನಿಂಬೆ ಕೃಷ್ಣ ತುಳಸಿ, ನೆಲ್ಲಿಕಾಯಿ, ಜಾಲಿ ಮರ, ನೀಲಗಿರಿ ಹೀಗೆ ವಿವಿಧ ಆಯುರ್ವೇದ ಗಿಡ ಮೂಲಿಕೆ ಔಷಧಿ ಸಸಿಗಳನ್ನು ಕಳೆದ 5 ತಿಂಗಳಿಂದ ಬೆಳೆಸುತ್ತಿದ್ದಾರೆ.
ಪಿಎಸ್ಐ ರಾಜಶೇಖರ ಅವರ ಶ್ರಮದಾನಕ್ಕೆ ಠಾಣೆಯ ಸಿಬ್ಬಂದಿ ಕೂಡ ಕೈಜೋಡಿಸಿದ್ದಾರಂತೆ. ಸಮಯ ಸಿಕ್ಕಾಗೆಲ್ಲ ಕಳೆ (ಕಸ) ತೆಗೆಯುವುದು ಸೇರಿ ಅಗತ್ಯ ಸಹಾಯ, ಸಹಕಾರವನ್ನು ಸಿಬ್ಬಂದಿ ನೀಡುತ್ತಿದ್ದಾರೆ ಎನ್ನುತ್ತಾರೆ ಪಿಎಸ್ಐ ರಾಜಶೇಖರ ರಾಠೋಡ. ಈ ಹಿಂದೆ ಸುಲೇಪೇಟ ಹಾಗೂ ಚಿಂಚೋಳಿಯಲ್ಲಿ ಕರ್ತವ್ಯದಲ್ಲಿದ್ದಾಗಲೂ ಅಲ್ಲಿ ಸಹ ಹಸಿರು ವನ ನಿರ್ಮಿಸಿದ್ದರು.