ಕರ್ನಾಟಕ

karnataka

ETV Bharat / city

ಕಲಬುರಗಿ ಕಾಂಗ್ರೆಸ್ ಸಂಕಲ್ಪ ಸಮಾವೇಶ: ಕಾರ್ಯಕರ್ತರಿಗೆ ಡಿಕೆಶಿ ಹೇಳಿದ್ದೇನು?

ಕಾಂಗ್ರೆಸ್ ಸಂಕಲ್ಪ ಸಮಾವೇಶವನ್ನು ಕಲಬುರಗಿಯ ರಾಜಾಪುರ ರಸ್ತೆಯ ಜೈ ಭವಾನಿ ಕನ್ವೇಷನ್ ಹಾಲ್​ನಲ್ಲಿ ಆಯೋಜಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ರಾಜ್ಯಮಟ್ಟದ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಕಲಬುರಗಿ ಕಾಂಗ್ರೆಸ್ ಸಂಕಲ್ಪ ಸಮಾವೇಶ
ಕಲಬುರಗಿ ಕಾಂಗ್ರೆಸ್ ಸಂಕಲ್ಪ ಸಮಾವೇಶ

By

Published : Jan 18, 2021, 2:28 PM IST

Updated : Jan 18, 2021, 2:58 PM IST

ಕಲಬುರಗಿ: ಬೇರು ಮಟ್ಟದಿಂದ ಕಾಂಗ್ರೆಸ್ ಗಟ್ಟಿಗೊಳಿಸಲು ಕೈಗೊಂಡಿರುವ ಕಾಂಗ್ರೆಸ್ ಸಂಕಲ್ಪ ಸಮಾವೇಶ ಕಲಬುರಗಿಯ ರಾಜಾಪುರ ರಸ್ತೆಯ ಜೈ ಭವಾನಿ ಕನ್ವೇಷನ್ ಹಾಲ್​ನಲ್ಲಿ ನಡೆಯುತ್ತಿದೆ.

ಕಲಬುರಗಿ ಕಾಂಗ್ರೆಸ್ ಸಂಕಲ್ಪ ಸಮಾವೇಶ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ರಾಜ್ಯಮಟ್ಟದ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಕಲಬುರಗಿ ವಿಭಾಗದ ಆರು ಜಿಲ್ಲೆಯ 40 ತಾಲೂಕಿನ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಧ್ವಜಾರೋಹಣ ನೇರವೇರಿಸಿದ ಬಳಿಕ ಜ್ಯೋತಿ ಬೆಳಗಿಸಿ ಕಾಂಗ್ರೆಸ್ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಲಾಯಿತು‌. ಈ ಸಂದರ್ಭದಲ್ಲಿ‌ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಎಸ್ ಆರ್ ಪಾಟೀಲ್, ವಿ.ಆರ್.‌ಸುದರ್ಶನ್, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಅಲ್ಲಮಪ್ರಭು ಪಾಟೀಲ್, ಎಂ ವೈ ಪಾಟೀಲ್, ಸೇರಿದಂತೆ ಮತ್ತಿತರಿದ್ದರು.

ಸಂಕಲ್ಪ ಸಮಾವೇಶದಲ್ಲಿ ಡಿಕೆಶಿ ಕರೆ:

ಜನರ ಸಮಸ್ಯೆಗಳನ್ನು ಗುರುತಿಸಿ,‌ ಜನರ ಧ್ವನಿ ಕಾಂಗ್ರೆಸ್ ಕಾರ್ಯಕರ್ತರ ಧ್ವನಿಯಾಗಬೇಕು. ನಾವೆಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಂಕಲ್ಪದ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವ ಸಂಕಲ್ಪ ತೊಡುವುದಕ್ಕಾಗಿ ಈ ಸಮಾವೇಶ ಏರ್ಪಡಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಪ್ರಮುಖರನ್ನು ಇಂದಿನ ಸಭೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಇತರ ವಿಭಾಗಗಳಲ್ಲಿ ಈಗಾಗಲೇ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ನೀವು‌ ನಿಮಗೆ ಕೊಟ್ಟಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮ ಪಕ್ಷದ ನಾಯಕರ ಬಗ್ಗೆ ಹಾಡಿ ಹೊಗಳುವ ಬದಲು ಪಕ್ಷದ ಬಲವರ್ಧನೆ ಕುರಿತು ಮಾತನಾಡಿ ಎಂದರು. ಪಂಚಾಯತ್​ ಮಟ್ಟದಲ್ಲಿ ಪ್ರಜಾಪ್ರತಿನಿಧಿ ಸಮಾವೇಶ ನಡೆಸಿ. ಪ್ರತಿ ಬೂತ್​ ಮಟ್ಟದಲ್ಲಿ ಪಕ್ಷದ ಕಾರ್ಯಕ್ರಮ ಕುರಿತು ಯುವಕರನ್ನು ಸಿದ್ಧಗೊಳಿಸಿ ಡಿಜಿಟಲ್ ಹಾಗೂ ಸೋಷಿಯಲ್‌ ಮೀಡಿಯಾ ಟೀಮ್ ರಚಿಸಬೇಕಾಗಿದೆ ಎಂದರು.

ಇನ್ನು ಮುಂದೆ ಬರುವ ತಾಪಂ, ಜಿಪಂ ಹಾಗೂ ವಿಧಾನಸಭೆ ಚುನಾವಣೆಗೆ ನಿಲ್ಲುವವರಿಗೆ ತರಬೇತಿ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಪಕ್ಷದ ಬೇರೆ ಬೇರೆ ಸೆಲ್​ಗಳಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸೆಲ್ ರಚಿಸಲು ತೀರ್ಮಾನಿಸಲಾಗಿದೆ. ನಮ್ಮ ಪಕ್ಷದಿಂದ ಕೆಲ ಸಮುದಾಯಗಳು ಹಾಗೂ ನಾಯಕರು ದೂರ ಹೋಗಿದ್ದು, ಅವರನ್ನು ಮತ್ತೆ ವಾಪಸ್ ಕರೆ ತರಲು ನೀವು ತಯಾರಾಗಿ. ನಿಮಗೆ ಅತ್ಯಂತ ಜವಾಬ್ದಾರಿ ಇದೆ. ನೀವು ಅದನ್ನು ಸಮರ್ಥವಾಗಿ ನಿಭಾಯಿಸಿ. ನಮ್ಮ ಪಕ್ಷದ ಸಿದ್ಧಾಂತಗಳನ್ನು ಆಶಯಗಳನ್ನು ಮುಂದುವರೆಸಿಕೊಂಡು‌ ಹೋಗಬೇಕು. ಅವಕಾಶಗಳನ್ನು ಸೃಷ್ಟಿಸಿಕೊಂಡು ಪಕ್ಷವನ್ನು ಪ್ರಬಲಗೊಳಿಸಿ ಎಂದು ಕರೆ ನೀಡಿದರು.

Last Updated : Jan 18, 2021, 2:58 PM IST

ABOUT THE AUTHOR

...view details