ಕಲಬುರಗಿ: ಸೂರ್ಯನಗರಿ ಎಂದೇ ಖ್ಯಾತಿ ಪಡೆದಿರುವ ಬಿಸಿಲೂರು ಕಲಬುರಗಿಯಲ್ಲಿ ಬೇಸಿಗೆ ಆರಂಭದಲ್ಲೇ ರವಿ ತನ್ನ ಪ್ರತಾಪ ತೋರಿಸುತ್ತಿದ್ದಾನೆ. ನೆತ್ತಿ ಸುಡುತ್ತಿರುವ ಬಿರು ಬಿಸಿಲಿಗೆ ಬಸವಳಿದ ಜನ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ರಣ ಬಿಸಿಲಿಗೆ ಕಂಗಾಲಾದ ಕಲಬುರಗಿ ಮಂದಿ
ಬೇಸಿಗೆ ಆರಂಭದಲ್ಲೇ ರಣ ಬಿಸಿಲಿನ ತಾಪಕ್ಕೆ ಕಲಬುರಗಿ ಜನ ತತ್ತರಿಸಿ ಹೊಗಿದ್ದಾರೆ. ಈ ಬಾರಿಯ ಬೇಸಿಗೆ ಬಿಸಿಲು ಜಿಲ್ಲೆಯ ಜನರು ಬಸವಳಿಯುವಂತೆ ಮಾಡಿದ್ದು, ಏಪ್ರಿಲ್ ಮತ್ತು ಮೇ ತಿಂಗಳು ಕಳೆಯೋದು ಹೇಗಪ್ಪ ಅಂತಾ ಚಿಂತೆಯಲ್ಲಿ ಮುಳುಗಿದ್ದಾರೆ.
ಹೌದು, ಈ ಬಾರಿ ಕಲಬುರಗಿಯಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಲು ನೆತ್ತಿ ಸುಡುತ್ತಿದೆ. 37 ರಿಂದ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಬಿಸಿಲು ಸಂಜೆ 6 ಗಂಟೆಯಾದರೂ ಕಡಿಮೆ ಆಗುತ್ತಿಲ್ಲ. ಹೀಗಾಗಿ ಮಧ್ಯಾಹ್ನದ ಹೊತ್ತು ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಜೊತೆಗೆ ಬೇಸಿಗೆ ಬೇಗೆ ತಾಳದೇ ಜನರು ತಂಪು ಪಾನಿಯಗಳು ಹಾಗೂ ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ.
ಇನ್ನು ಬಿಸಿಲಿಗೆ ಡಂಬರ್ ರಸ್ತೆ ಕಾದ ಹಂಚಿನಂತಾಗುತ್ತಿದೆ. ಇದರಿಂದಾಗಿ ಮಧ್ಯಾಹ್ನದ ಹೊತ್ತು ರಸ್ತೆಗಳಲ್ಲಿ ಜನ ಸಂಚಾರ ಕಡಿಮೆಯಾಗಿದೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಡಾಂಬರ್ ಹಾಗೂ ಸಿಸಿ ರಸ್ತೆಗಳಿಗೆ ನಿತ್ಯ ನೀರು ಸಿಂಪಡಿಸಬೇಕು ಹಾಗೂ ಗಿಡ ಮರಗಳಿಗೆ ನೀರು ಹಾಕುವ ವ್ಯವಸ್ಥೆ ಮಾಡಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.