ಕಲಬುರಗಿ :ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನದಿಂದ ನೂರಾರು ಜನರಿಗೆ ನರೇಗಾ ದಾರಿದೀಪವಾಗಿದೆ. ಗ್ರಾಮದಲ್ಲಿ ಸರಿ ಸುಮಾರು 1,200 ಮನೆಗಳಿದ್ದು, 600ಕ್ಕಿಂತ ಅಧಿಕ ಮನೆಗಳ ಜನರು ಅಂದರೆ ಶೇಕಡಾ 50%ರಷ್ಟು ಜನರು ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕೆಲಸ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ.
ನರೇಗಾದಲ್ಲಿ ಅನಕ್ಷರಸ್ಥರು ಮಾತ್ರವಲ್ಲ ಕೊರೋನಾದಿಂದ ಕೆಲಸ ಕಳೆದುಕೊಂಡು ಮರಳಿ ಗ್ರಾಮದತ್ತ ಮುಖ ಮಾಡಿದ ಡಿಗ್ರಿ, ಪಿಯುಸಿ, ಐಟಿಐ ಮುಗಿಸಿದವರು ಸಹ ಇದೇ ಉದ್ಯೋಗ ಖಾತ್ರಿಯಲ್ಲಿ ದಿನಕ್ಕೆ 300 ರೂ, ನಿಗದಿತ ಕೂಲಿಯಂತೆ ಕೆಲಸ ಮಾಡುತ್ತಿರುವುದು ಗಮನಾರ್ಹ ವಿಷಯವಾಗಿದೆ. ಇನ್ನು ಇಲ್ಲಿಯೇ ಕೆಲಸ ಸಿಗುವಾಗ ಹೆಂಡತಿ, ಮಕ್ಕಳ ಬಿಟ್ಟು ಬೇರೆ ಊರಿಗೆ ಗುಳೆ ಹೋಗುವ ಬದಲು ಇಲ್ಲೇ ಕೆಲಸ ಮಾಡಿಕೊಂಡು ಹಾಯಾಗಿದ್ದೇನೆ ಅಂತಾರೆ ಕಾರ್ಮಿಕ ಸಾಯಬಣ್ಣಾ.
ನರೇಗಾದಿಂದ ಹಸನಾಗುತ್ತಿರುವ ಊರು ಮತ್ತು ಬದುಕು ಸದ್ಯ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಒಂದು ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಹೊಂದಲಾಗಿದ್ದು, ಅದರಲ್ಲಿ 45 ಸಾವಿರ ಗಿಡಗಳನ್ನು ನೆಡಲಾಗಿದೆ. ಒಂದು ಕೆರೆಯನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಕಾಡು ಪ್ರದೇಶ ಇರುವ ಕಾರಣಕ್ಕೆ ಕಾಡು ಪ್ರಾಣಿ-ಪಕ್ಷಿಗಳಿಗಾಗಿ ಒಂದು ಕಿಲೋ ಮೀಟರ್‌ಗೆ ಒಂದರಂತೆ ನೀರಿನ ಟ್ಯಾಂಕ ಮತ್ತು ಹೌಜ ಸಹ ನಿರ್ಮಿಸುವ ಗುರಿ ಹೊಂದಲಾಗಿದೆ.
ನರೇಗಾ ಯೋಜನೆಯಿಂದ ಹೊನ್ನಕಿರಣಗಿ ಗ್ರಾಮದ ಬಡವರಿಗೆ ಒಂದೊತ್ತಿನ ಅನ್ನ ಸಿಗುತ್ತಿರುವುದೇನೋ ನಿಜ ಆದ್ರೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ಮಾತ್ರ ನೀಡಲಾಗುತ್ತದೆ. ಇದರ ಜೊತೆಗೆ ಇನ್ನೂ 100 ದಿನಗಳ ಕಾಲ ಹೆಚ್ಚುವರಿ ಉದ್ಯೋಗ ಸಿಕ್ಕರೆ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಲಿ ಅನ್ನೋದೆ ಈಟಿವಿ ಭಾರತದ ಕಳಕಳಿ.
ಇದನ್ನೂ ಓದಿ :ಶಾಸಕರ ಸರಣಿ ಭೇಟಿ ಬೆನ್ನಲ್ಲೇ ಬಿಎಸ್‍ವೈ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಆಗಮನ