ಕಲಬುರಗಿ :ಕೋವಿಡ್ ಹಾವಳಿಯಿಂದಾಗಿ ಕಳೆದ ಎರಡು ವರ್ಷದಿಂದ ನಡೆಯದ ಕಲ್ಯಾಣ ಕರ್ನಾಟಕ ಜನತೆಯ ಆರಾಧ್ಯ ದೈವ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ಈ ಬಾರಿ ಕಳೆಕಟ್ಟಿದೆ. ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ರಥೋತ್ಸವಕ್ಕೆಂದು ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.
ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರ ಸಾನಿಧ್ಯದಲ್ಲಿ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಸಾರಥ್ಯದಲ್ಲಿ ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇಂದು ಸಾಯಂಕಾಲ 6 ಗಂಟೆಗೆ ಭವ್ಯ ರಥೋತ್ಸವ ನೆರವೇರಲಿದೆ. ಚಿ.ಅಪ್ಪ 'ಪರುಷ ಬಟ್ಟಲು' ಪ್ರದರ್ಶನ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಎರಡು ವರ್ಷದ ಬಳಿಕ ಕಳೆಗಟ್ಟಿದ ಶರಣಬಸವೇಶ್ವರರ ಜಾತ್ರೆ.. ಇಂದು ಸಂಜೆ ಭವ್ಯ ರಥೋತ್ಸವ.. ಭಕ್ತರ ದಂಡು ಆಗಮನ :ರಥೋತ್ಸವ ನಿಮಿತ್ತಬೆಳಗ್ಗೆಯಿಂದಲೇ ಶರಣರ ದರ್ಶನಕ್ಕೆ ಜನರ ದಂಡು ಆಗಮಿಸುತ್ತಿದೆ. ಸಾಲಿನಲ್ಲಿ ನಿಂತು ಶರಣಬಸವೇಶ್ವರರ ದರ್ಶನ ಪಡೆಯುತ್ತಿದ್ದಾರೆ. ವಿಶೇಷ ತ್ರಿಕಾಲ ಪೂಜೆ ನೆರವೇರುತ್ತಿದೆ. ಜಾತ್ರಾ ಮಹೋತ್ಸದ ನಿಮಿತ್ತ ವಿಶೇಷ ಅಲಂಕಾರದಿಂದ ಶರಣಬಸವೇಶ್ವರರ ಮೂರ್ತಿ ಕಂಗೊಳಿಸುತ್ತಿದೆ. ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾಲ ಮಾಡಲಾಗಿದ್ದು, ಝಗಮಗಿಸುತ್ತಿವೆ.
ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ದೂರದ ಧಾರವಾಡ, ಬೆಳಗಾವಿ, ಗದಗ, ವಿಜಯಪುರ ಹಾಗೂ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದಿಂದಲೂ ಸಮರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ಶರಣರ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಹರಿಕೆ ತೀರಿಸುತ್ತಿದ್ದಾರೆ.