ಕಲಬುರಗಿ :ತೊಗರಿ ನಾಡಿನಲ್ಲಿ ಈ ವರ್ಷವೂ ವರುಣನ ಅಬ್ಬರ ಜೋರಾಗಿದ್ದು, ಎರಡಬಿಡದೆ ಆರ್ಭಟಿಸುತ್ತಿರುವ ಮೇಘರಾಜನ ಆಟಕ್ಕೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿ ಜನ ಹೈರಾಣಾಗಿದ್ದಾರೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯತ್ತಿದ್ದು, ನೀರಿನ ರಭಸಕ್ಕೆ ಅಫಜಲಪುರ ತಾಲೂಕಿನ ಹಾವನೂರ ಗ್ರಾಮದ ಸಂಪರ್ಕ ಸೇತುವೆ ಕೊಚ್ಚಿಹೋಗಿ, ಶಾಲಾ- ಕಾಲೇಜು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆ ಎದುರಾಗಿದೆ.
ನೀರಿನ ರಭಸಕ್ಕೆ ಸೇತುವೆ ತಡೆಗೋಡೆಗಳು ಛಿದ್ರವಾಗಿ ಬಿದ್ದಿವೆ. ಸೇತುವೆ ಒಡೆದಿರೋದ್ರಿಂದ ಸಂಪರ್ಕ ಕಡಿತವಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಊರಿಗೆ ಬರುತ್ತಿದ್ದ ಸಾರಿಗೆ ಬಸ್ ಸಂಚಾರವೂ ಸ್ಥಗಿತವಾಗಿದೆ. ಇದರಿಂದ ಕಲಬುರಗಿ ನಗರದ ಸೇರಿ ಬೇರೆ ಬೇರೆ ಕಡೆಗಳಲ್ಲಿ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು ಮೂರು ಕಿ.ಮೀ ದೂರದ ಮುಖ್ಯರಸ್ತೆಗೆ ನಡೆದುಕೊಂಡು ಹೋಗುವಂತಾಗಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೂ ಹಿನ್ನಡೆಯಾಗುತ್ತಿದೆ.
ಶಾಸಕರಿಂದ ಕೇವಲ ಭರವಸೆ ಮಾತು:ಕಳೆದ ವರ್ಷ ಸುರಿದಿದ್ದ ಧಾರಾಕಾರ ಮಳೆಗೆ ಸೇತುವೆ ಶಿಥಿಲಗೊಂಡಿತ್ತು. ಆದರೆ ಕಳೆದ 20 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳ್ಳ ತುಂಬಿ ಹರಿದು ಭಾಗಶಃ ಸೇತುವೆ ಕೊಚ್ಚಿಕೊಂಡು ಹೋಗಿದೆ. ದ್ವಿಚಕ್ರ ಸವಾರರು ಅಪಾಯದ ನಡುವೆಯೇ ಭಯದಲ್ಲಿ ಡ್ಯಾಮೇಜ್ ಸೇತುವೆ ದಾಟಿ ಸಂಚಾರ ಮಾಡುತ್ತಿದ್ದಾರೆ. ಕೊಂಚ ಯಾಮಾರಿದರೂ ಅಪಾಯ ಖಂಡಿತ.